ಖಾಲಿ ನಿವೇಶನ ಸ್ವಚ್ಛಗೊಳಿಸದಿದ್ದರೆ ದಂಡ ಆಕರಣೆ

11 ANG 1
Published on

ಅಣ್ಣಿಗೇರಿ: ಪಟ್ಟಣದ ವಿವಿಧ ಓಣಿಗಳಲ್ಲಿನ ರಸ್ತೆಯಲ್ಲಿ ಸ್ಥಳೀಯರು ಹಾಕುತ್ತಿರುವ ಕಟ್ಟಿಗೆ, ಕಲ್ಲುಗಳನ್ನು ತೆರವುಗೊಳಿಸಲು ಪುರಸಭೆ ಸರ್ವಸದಸ್ಯರು ಒಮ್ಮತದ ನಿರ್ಣಯ ಕೈಗೊಂಡರು.

ಪಟ್ಟಣದ ಪುರಸಭೆ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಪಟ್ಟಣದ ಅಭಿವೃದ್ಧಿ ವಿಷಯಗಳ ಕುರಿತು ಸದಸ್ಯರು ರ್ಚಚಿಸಿದರು.

ರಸ್ತೆಯಲ್ಲಿ ಕಟ್ಟಿಗೆ ಹಾಗೂ ಕಲ್ಲು ಇತ್ಯಾದಿ ವಸ್ತುಗಳನ್ನು ತೆರವುಗೊಳಿಸಲು 15 ದಿನಗಳ ಗಡುವು ನೀಡಿ, ಒಂದು ವೇಳೆ ತೆರವು ಮಾಡದಿದ್ದರೆ ಅವುಗಳನ್ನು ಪುರಸಭೆ ವಶಕ್ಕೆ ಪಡೆಯುವಂತೆ ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರಗೆ ಸೂಚನೆ ನೀಡಲಾಯಿತು.

ವಿವಿಧ ಬಡಾವಣೆಗಳಲ್ಲಿರುವ ಖಾಲಿ ನಿವೇಶನಗಳನ್ನು ಮಾಲೀಕರು ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ಪುರಸಭೆ ವತಿಯಿಂದ ಸ್ವಚ್ಛಗೊಳಿಸಿ ನಿವೇಶನಗಳ ಮೇಲೆ 5 ಸಾವಿರ ರೂ. ಭೋಜಾ ದಾಖಲಿಸುವಂತೆ ಮುಖ್ಯಾಧಿಕಾರಿಗೆ ಸದಸ್ಯರು ಒತ್ತಾಯಿಸಿದರು.

ಪಟ್ಟಣದ 23 ವಾರ್ಡ್​ಗಳಲ್ಲಿನ ಮುಖ್ಯ ರಸ್ತೆಗಳಿಗೆ ನಾಮಫಲಕ ಅಳವಡಿಸುವುದು, ಕಲಬಂಡೇಶ್ವರ ದೇವಸ್ಥಾನದ ಜಾಗ ಸಚ್ಛಗೊಳಿಸುವುದು, 2022-23ನೇ ಸಾಲಿನ ಪೌರ ಕಾರ್ವಿುಕರ ಆರೋಗ್ಯ ತಪಾಸಣೆಯ ಮೊತ್ತಕ್ಕೆ ಕ್ರಿಯಾಯೋಜನೆ ಸಲ್ಲಿಸುವ ಕುರಿತು, ಅಮೃತ ನೈರ್ಮಲ್ಯ ಯೋಜನೆಯಡಿ ಬಂದ 1 ಕೋಟಿ ಅನುದಾನದಲ್ಲಿ ಉಳಿದ 9 ಲಕ್ಷ ರೂ.ಗಳಲ್ಲಿ ಎಸ್​ಡಬ್ಲ್ಯೂಎಂ ಸೈಟ್​ಗೆ ಬೇಲಿಂಗ್ ಮಷಿನ್ ಹಾಗೂ ಮನೆ ಮನೆ ಕಸ ಸಂಗ್ರಹಣೆಗಾಗಿ ಡಸ್ಟ್​ಬಿನ್ ಖರೀದಿಸುವ ಕುರಿತು ಮತ್ತು ಮಳೆಯಿಂದ ಹದಗೆಟ್ಟ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ಕುರಿತು ತೀರ್ವನಿಸಲಾಯಿತು.

ಮುಖ್ಯಾಧಿಕಾರಿ ಗದ್ದಿಗೌಡರ ಮಾತನಾಡಿ, ಎಸ್​ಎಫ್​ಸಿ ಅನುದಾನದಲ್ಲಿ 75 ಲಕ್ಷ ರೂ., 15ನೇ ಹಣಕಾಸು ಯೋಜನೆ ಅನುದಾನದಲ್ಲಿ 1.54 ಲಕ್ಷ ರೂ. ಹಾಗೂ ಪುರಸಭೆ ಉಳಿತಾಯದ 74 ಲಕ್ಷ ರೂ.ಗಳಲ್ಲಿ ಪಟ್ಟಣದ ಅಭಿವೃದ್ಧಿಗಾಗಿ ವಿವಿಧ ಕಾಮಗಾರಿಗಳಿಗೆ ಅನುದಾನ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಫರವೀನಾಭಾನು ಬಸಾಪುರ ಮಾತನಾಡಿ, 13ನೇ ವಾರ್ಡಿನಲ್ಲಿ ಅಂಗನವಾಡಿ ಕೇಂದ್ರ ನಿರ್ವಿುಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ‘ಪಟ್ಟಣದಲ್ಲಿನ ಅಂಗನವಾಡಿ ಕೇಂದ್ರಗಳ ಕುರಿತು ಮಾಹಿತಿ ತರಿಸಿಕೊಂಡು, ಯಾವ ವಾರ್ಡ್​ಗಳಲ್ಲಿ ಅಂಗನವಾಡಿ ಕೇಂದ್ರಗಳಿಲ್ಲ. ಅಲ್ಲಿ ಅಂಗನವಾಡಿ ಕೇಂದ್ರಗಳನ್ನು ನಿರ್ವಿುಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಭರವಸೆ ನೀಡಿದರು.

ಅಧ್ಯಕ್ಷೆ ರಜಿಯಾಬೇಗಂ ರೊಕ್ಕದಕಟ್ಟಿ, ಉಪಾಧ್ಯಕ್ಷೆ ಜಯಲಕ್ಷ್ಮೀ ಜಕರಡ್ಡಿ, ಸ್ಥಾಯಿಸಮಿತಿ ಅಧ್ಯಕ್ಷ ಅಮೃತ ಮೀಶಿ, ಸದಸ್ಯರಾದ ಈಶ್ವರ ಕಾಳಪ್ಪನವರ, ನಾಗರಾಜ ದಳವಾಯಿ, ಎ.ಪಿ. ಗುರಿಕಾರ, ಚಂದ್ರನಾಥ ನಾವಳ್ಳಿ, ನೀಲವ್ವ ಕುರಹಟ್ಟಿ, ಬಾಬಾಜಾನ ಮುಲ್ಲಾನವರ, ಶಿವಾನಂದ ಬೆಳಹಾರ, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net