ನಿವೇಶನ ನೀಡದ ಬಿಲ್ಡರ್‌ಗೆ ದಂಡ

law-4617873_1920
Published on

ಧಾರವಾಡ: ನಗರದ ಕೆಎಚ್‌ಬಿ ಕಾಲನಿಯ ಹನುಮಂತಪ್ಪ ನಾಯಕ ಎಂಬುವವರು ಮೈಸೂರಿನಲ್ಲಿ 30*40 ಅಳತೆಯ ನಿವೇಶನ ಖರೀದಿಗೆ 3 ಕಂತುಗಳಲ್ಲಿ ಒಟ್ಟು 3,16,800 ರೂ. ಪಾವತಿಸಿದ್ದರು. ಆದರೆ ಬಿಲ್ಡರ್ ಇನ್ನೂ ನಿವೇಶನ ನೀಡದ ಕಾರಣ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದೆ.
ನಿವೇಶನ ನೀಡುವ ಭರವಸೆ ನೀಡಿ 2014ರ ಅಕ್ಟೋಬರ್‌ನಲ್ಲಿ ಕರಾರು ಪತ್ರ ಬರೆದುಕೊಟ್ಟಿದ್ದರು. ಭೂಮಿ ಅಭಿವೃದ್ಧಿಗೊಳಿಸಿ ನಿಗದಿತ ಅವಧಿಯಲ್ಲಿ ನಿವೇಶನ ನೋಂದಣಿ ಮಾಡಿ ಕೊಟ್ಟಿರಲಿಲ್ಲ. ಹೀಗಾಗಿ ನಾಯಕ ಅವರು 2022ರ ನವೆಂಬರ್‌ನಲ್ಲಿ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರು, 7-8 ವರ್ಷವಾದರೂ ನಿವೇಶನ ನೀಡಿಲ್ಲ. ಹಣವನ್ನೂ ಮರು ಪಾವತಿ ಮಾಡಿಲ್ಲ. ಹೀಗಾಗಿ ನಾಯಕರ ಅವರು ನೀಡಿದ 3,16,800 ರೂ. ಹಣಕ್ಕೆ ಶೇ. 8ರಂತೆ 2023ರ ಅ. 10ರವರೆಗೆ ಬಡ್ಡಿ ಸೇರಿಸಿ ಒಟ್ಟು 4,64,640 ರೂ. ಗಳನ್ನು ತೀರ್ಪು ನೀಡಿದ ಒಂದು ತಿಂಗಳಲ್ಲಿ ಪಾವತಿಸಬೇಕು. ಇದಲ್ಲದೆ ದೂರುದಾರರಿಗೆ ಆಗಿರುವ ಅನನುಕೂಲತೆ ಮತ್ತು ಮಾನಸಿಕ ಹಿಂಸೆಗೆ 50 ಸಾವಿರ ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು ಎಂದು 10 ಸಾವಿರ ರೂ. ನೀಡಬೇಕು ಎಂದು ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net