ದೋಷಪೂರಿತ ನಂಬರ್ ಪ್ಲೇಟ್‌ಗಳ ವಿರುದ್ಧ ದಂಡ ಸಮರ

37
Published on

ಮೈಸೂರು: ನಂಬರ್ ಪ್ಲೇಟ್ ಸರಿ ಇಲ್ಲದಿರುವುದು, ದಂಡ ಇದ್ದರೂ ಪಾವತಿಸದೆ ತಪ್ಪಿಸಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚಾರ ನಿಯಮ ಉಲ್ಲಂಘಿಸುವ, ದಂಡ ಪಾವತಿಸದ ವಾಹನ ಸವಾರರ ವಿರುದ್ಧ ಎರಡು ದಿನಗಳಿಂದ ವಿಶೇಷ ಕಾರ್ಯಾಚರಣೆ ನಡೆಸಿದ ಸಂಚಾರ ಪೊಲೀಸರು, 162 ವಾಹನಗಳ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೇವರಾಜ, ವಿ.ವಿ.ಪುರಂ, ಕೃಷ್ಣರಾಜ, ಕುವೆಂಪುನಗರ, ಸಿದ್ಧಾರ್ಥನಗರ, ನರಸಿಂಹರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಶೇಷ ತಪಾಸಣಾ ಕಾರ್ಯ ನಡೆಸಲಾಗಿದೆ.

ಈ ವೇಳೆ ದೋಷಪೂರಿತ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿಕೊಂಡಿದ್ದ ವಾಹನ ಸವಾರರನ್ನು ಪತ್ತೆ ಹಚ್ಚಿದ್ದಾರೆ. ಉದ್ದೇಶಪೂರ್ವಕವಾಗಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಿಂದ ಪಾರಾಗಲು ಈ ವಾಹನ ಸವಾರರು, ನಂಬರ್ ಪ್ಲೇಟ್‌ಗೆ ಸ್ಟಿಕ್ಕರ್ ಅಂಟಿಸುವುದು, ಪ್ಲೇಟ್ ಬಾಗಿಸುವುದು, ಪ್ಲೇಟ್ ಮೇಲೆ ನಿಂಬೆಹಣ್ಣು ಸೇರಿದಂತೆ ಇತರ ವಸ್ತುಗಳನ್ನು ಕಟ್ಟುವ ಮೂಲಕ ಎಐ ಕ್ಯಾಮರಾಗಳು ವಾಹನ ನೋಂದಣಿ ಸಂಖ್ಯೆಯನ್ನು ಸರಿಯಾಗಿ ಗುರುತಿಸಲು ಸಾಧ್ಯವಾಗದಂತೆ ಮಾಡುತ್ತಿದ್ದರು.

ಇಂತಹ ವಾಹನಗಳನ್ನು ವಶಪಡಿಸಿಕೊಂಡು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರದರ್ಶಿಸುವ ಮೂಲಕ ಇತರ ವಾಹನ ಸವಾರರಿಗೂ ಎಚ್ಚರಿಕೆ ನೀಡಲಾಯಿತು.

ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಮಾರ್ಗದರ್ಶನದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿಕೊಂಡು ವಾಹನ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ನಿಯಮ ಮೀರಿದ ಸವಾರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಇತರರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಂಚಾರ ವಿಭಾಗದ ಎಸಿಪಿ ಶಿವಶಂಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net