ದಂಡದ ಮೊತ್ತ ಚಿನ್ನದ ವ್ಯಾಪಾರಿ ಖಾತೆಗೆ!

24 bkl
Published on

ಭಟ್ಕಳ: ಹೆಲ್ಮೆಟ್ ರಹಿತ ದಂಡದ ಮೊತ್ತ ಪೊಲೀಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪಾರಿಯ ಖಾತೆಗೆ ವರ್ಗಾವಣೆಯಾಗುತ್ತಿರುವ ಅಂಶ ಬೆಳಕಿಗೆ ಬಂದಿರುವುದು ಸಾರ್ವಜನಿಕರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಭಟ್ಕಳ ಪೊಲೀಸ್ ಇಲಾಖೆಯಿಂದ ಕಳೆದ ಒಂದು ತಿಂಗಳಿಂದ ನಗರ ಭಾಗ ಸೇರಿ ಪ್ರಮುಖ ಸ್ಥಳದಲ್ಲಿ ದ್ವಿಚಕ್ರ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಕೆಲವು ಕಡೆ ವಾಹನ ಸವಾರರಿಂದ ದಂಡ ಪಾವತಿಸಿಕೊಂಡ ಹಣದ ದುರ್ಬಳಕೆ ಆಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನ್ನೆಲೆಯಲ್ಲಿ ಉದಯ ನಾಯ್ಕ ಎಂಬುವರು ಹೆಲ್ಮೇಟ್ ಧರಿಸದೆ ತೆರಳಿದ್ದು, ದಂಡ ಕಟ್ಟುವಂತೆ ಪೊಲೀಸರು ಸೂಚಿಸಿದ್ದಾರೆ. ತನ್ನ ಬಳಿ ನಗದು ಇಲ್ಲವೆಂದಾಗ ಆನ್‌ಲೈನ್ ಮೂಲಕ ಪಾವತಿಸಿ ಎಂದು ೆನ್ ನಂಬರ್ ನೀಡಿದ್ದಾರೆ.

ಹಣ ವರ್ಗಾಯಿಸುವಾಗ ಖಾಸಗಿ ಚಿನ್ನದ ವ್ಯಾಪಾರಿಯ ಖಾತೆಗೆ ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಇದರಿಂದ ಹಣ ದುರುಪಯೋಗ ವಾಗುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಖಾಸಗಿ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆ ಆದ ಮೇಲೂ ಇಲಾಖೆಯ ಚಲನ್ ನೀಡಿದ್ದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದರಿಂದ ಚಲನ್ ಕೂಡ ನಕಲಿಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ದಂಡ ಹಾಕಿದ ರಸೀದಿಯಲ್ಲಿ ನಗದು ಎಂದು ನಮೂದಿಸಿದ್ದಾರೆ. ಆದರೆ, ಹಣವನ್ನು ಸ್ವೀಕರಿಸಿದ್ದು ಆನ್‌ಲೈನ್ ಮೂಲಕ. ಈ ರೀತಿ ದಂಡದ ಹಣವು ದುರ್ಬಳಕೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಗಮನ ಹರಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಇಲಾಖೆಯ ವತಿಯಿಂದ ಹಣದ ದುರ್ಬಳಕೆ ಎಂದಿಗೂ ಆಗುವುದಿಲ್ಲ. ಪೊಲೀಸ್ ಅಧಿಕಾರಿಗಳ ಬಳಿ ಬಾಡಿ ಕ್ಯಾಮರಾ ಇರುತ್ತದೆ. ಅಲ್ಲದೆ, ದಂಡ ವಸೂಲಿಯ ರಸೀದಿ ನೀಡಲಾಗಿದೆ. ಈ ಕುರಿತು ತನಿಖೆ ನಡೆಸಿ ಲೋಪ ಕಂಡು ಬಂದಲ್ಲಿ ಸೂಕ್ತ ಕ್ರಮಕ್ಕೆ ಶಿಾರಸು ಮಾಡಲಾಗುವುದು. ಮಹೇಶ ಎಂ.ಕೆ., ಡಿವೈಎಸ್‌ಪಿ ಭಟ್ಕಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net