

ಯಲ್ಲಾಪುರ: ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲೂ ಹಿಂದಿನ ಜಾತ್ರೆಯ ಖರ್ಚು ವೆಚ್ಚದ ಕುರಿತಾದ ಚರ್ಚೆಯೇ ಹೆಚ್ಚಿನ ಸಮಯ ನುಂಗಿತು.
ಐದಾರು ತಿಂಗಳಿಂದ ಪ್ರತಿ ಸಭೆಯಲ್ಲೂ, ಅಜೆಂಡಾದಲ್ಲಿ ಇಲ್ಲದಿದ್ದರೂ ಜಾತ್ರೆ ಲೆಕ್ಕಾಚಾರದ ವಿಷಯವೇ ಹೆಚ್ಚಿನ ಸಮಯ ನುಂಗುತ್ತಿದ್ದು, ಈ ಸಭೆಯಲ್ಲೂ ಅದೇ ಸಂಪ್ರದಾಯ ಮುಂದುವರಿಯಿತು.
ಜಾತ್ರೆಯ ಲೆಕ್ಕದ ವಿವರದ ಕುರಿತು ಹಿಂದಿನ ಸಭೆಯಲ್ಲಿ ಚರ್ಚೆಯೇ ನಡೆಯದ ವಿಷಯಗಳನ್ನೂ ಠರಾವಿನಲ್ಲಿ ಸೇರಿಸಿದ ಕುರಿತು ಸದಸ್ಯ ರಾಧಾಕೃಷ್ಣ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಜಾತ್ರೆಯಲ್ಲಿ 15 ಅಂಗಡಿ ಜಾಗಗಳನ್ನು ಒಬ್ಬರಿಗೇ ನೀಡುವಂತೆ ಅಧ್ಯಕ್ಷರು ಹೇಳಿದ್ದರು ಎಂಬ ಮಾತನ್ನು ಸಭೆಯಲ್ಲಿ ನಾನು ಹೇಳಿಯೇ ಇಲ್ಲ, ಹರಾಜು ಇಲ್ಲದೇ ಒಬ್ಬರಿಗೇ ನೀಡಲು ಸಾಧ್ಯವೂ ಇಲ್ಲ. ಪ್ರಸ್ತಾಪವೇ ಆಗದ ವಿಚಾರವನ್ನು ಠರಾವಿನಲ್ಲಿ ಹೇಗೆ ಸೇರಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸದಸ್ಯರಾದ ಸತೀಶ ನಾಯ್ಕ, ಸುನಂದಾ ದಾಸ್ ಇತರರು ಧ್ವನಿಗೂಡಿಸಿದರು. ಪ.ಪಂ. ಸಿಬ್ಬಂದಿ ಸಮಜಾಯಿಷಿ ನೀಡುವ ಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.
ಸದ್ದು ಮಾಡಿದ ‘ಪೆನ್ ಡ್ರೖೆವ್ ಪ್ರಕರಣ: ಜಾತ್ರೆಯ ಸಂದರ್ಭದಲ್ಲಿ ಯಾವ ಯಾವ ಸಿಬ್ಬಂದಿ ಏನೇನು ಕೆಲಸ ಮಾಡಿದ್ದೀರಿ ಎಂದು ಸದಸ್ಯರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸುವಾಗ ಸಿಬ್ಬಂದಿ ನಾಗರತ್ನಾ ನಾಯ್ಕ, ಪೂರ್ವಭಾವಿ ಸಭೆ, ಹರಾಜು ಪ್ರಕ್ರಿಯೆಯ ದಾಖಲೆಗಳು ಇರುವ ಪೆನ್ ಡ್ರೖೆವನ್ನು ಜಾತ್ರೆಯ ನಂತರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಸೋಮು ನಾಯ್ಕ ಅವರಿಗೆ ನೀಡಿರುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸೋಮು ನಾಯ್ಕ, ಜಾತ್ರೆಗೆ ಸಂಬಂಧಿಸಿದ ಯಾವ ಪೆನ್ ಡ್ರೖೆವನ್ನೂ ನನಗೆ ನೀಡಿಲ್ಲ, ಸಭೆಯಲ್ಲೇ ಪೆನ್ ಡ್ರೖೆವ್ ನೀಡಿರುವುದಾದಲ್ಲಿ ಉಪಸ್ಥಿತರಿದ್ದ ಸದಸ್ಯರಿಗೆಲ್ಲ ಈ ವಿಷಯ ತಿಳಿಯಬೇಕಿತ್ತು. ಯಾರಿಗೂ ತಿಳಿದಿಲ್ಲ ಎಂದು ಪೆನ್ ಡ್ರೖೆವ್ ಪಡೆದಿರುವುದನ್ನು ನಿರಾಕರಿಸಿದರು.
ಸರ್ಕಾರಿ ಕಡತವನ್ನು ಸದಸ್ಯರ ಕೈಗೆ ನೀಡಲು ಅವಕಾಶವಿದೆಯೇ ಎಂದು ರಾಧಾಕೃಷ್ಣ ನಾಯ್ಕ ಪ್ರಶ್ನಿಸಿದರು. ಹರಾಜು ಪ್ರಕ್ರಿಯೆ ಚಿತ್ರೀಕರಣ ಮಾಡಿದವರಿಂದ ಮೂರು ಪೆನ್ ಡ್ರೖೆವ್ ಪಡೆಯಲಾಗಿದೆ. ಆ ಪೆನ್ ಡ್ರೖೆವ್ಗಳು ಎಲ್ಲಿ ಹೋಯಿತೆಂದು ಸೋಮು ನಾಯ್ಕ ಕೇಳಿದರು. ಕೊನೆಗೂ ಇತ್ಯರ್ಥವಾಗದೇ ಪೆನ್ ಡ್ರೖೆವ್ ಪ್ರಕರಣಕ್ಕೆ ತೆರೆ ಬಿದ್ದಿತು.
ಮುಖ್ಯಾಧಿಕಾರಿ ಕುಮಾರ ನಾಯ್ಕ ಮಾತನಾಡಿ, ಜಾತ್ರೆಗೆ ಸಂಬಂಧಿಸಿದಂತೆ ಎಲ್ಲ ಸಿಬ್ಬಂದಿ ಸರಿಯಾದ ಮಾಹಿತಿ ನೀಡಬೇಕು. ನುಣುಚಿಕೊಳ್ಳಲು ಯತ್ನಿಸಿದರೆ ತನಿಖೆ ನಡೆಸುವುದು ಅನಿವಾರ್ಯ. ಆಗ ಕೈಗೊಳ್ಳುವ ಕ್ರಮಕ್ಕೆ ಯಾರೂ ಹೊಣೆಯಲ್ಲ ಎಂದು ಸಿಬ್ಬಂದಿಗೆ ಎಚ್ಚರಿಸಿದರು.
ಜಾತ್ರೆಯ ಹರಾಜು ಪ್ರಕ್ರಿಯೆಯ 13 ಲಕ್ಷ ರೂ ಅವ್ಯವಹಾರದ ಬಗ್ಗೆ ಸಿಬ್ಬಂದಿ ಬೇಕಾದಲ್ಲಿ ಅವಕಾಶ ತೆಗೆದುಕೊಂಡು ಸರಿಯಾದ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ತನಿಖೆಯ ಮೂಲಕವೇ ಸತ್ಯ ಹೊರಬರುವಂತೆ ಮಾಡೋಣ ಎಂದು ಸೋಮು ನಾಯ್ಕ ತಿಳಿಸಿದರು. </p>
ಮೂರು ಸಭೆ, ಮೂರು ಮುಖ್ಯಾಧಿಕಾರಿಗಳು!: ಪ್ರತಿ ಸಭೆಯಲ್ಲೂ ಜಾತ್ರೆಯ ವಿಷಯವೇ ದೊಡ್ಡದಾಗುತ್ತಿದ್ದು, ಇದೇ ಕಾರಣಕ್ಕಾಗಿ ಸದಸ್ಯರೊಂದಿಗಿನ ಕಿತ್ತಾಟದಲ್ಲಿ ಮುಖ್ಯಾಧಿಕಾರಿಯಾಗಿದ್ದ ಸುನೀಲ ಗಾವಡೆ ಹುದ್ದೆ ಬಿಟ್ಟು ತೆರಳಿದ್ದರು. ಅದರ ನಂತರ ಮುಂಡಗೋಡಿನ ಮುಖ್ಯಾಧಿಕಾರಿ ಚಂದ್ರಶೇಖರ ಎಂಬುವರು ಒಂದು ಸಭೆ ನಡೆಸಿದ್ದು, ನಂತರ ಅವರೂ ಹೋದರು. ಈಗ ಶುಕ್ರವಾರದ ಸಭೆಗೆ ಹೊಸದಾಗಿ ಕುಮಾರ ನಾಯ್ಕ ಮುಖ್ಯಾಧಿಕಾರಿಯಾಗಿ ಬಂದಿದ್ದಾರೆ. ಕಳೆದ ಮೂರು ಸಭೆಗಳಲ್ಲಿ ಮೂವರು ಮುಖ್ಯಾಧಿಕಾರಿಗಳು ಬಂದಿದ್ದು, ಜಾತ್ರೆಯ ವಿಷಯಕ್ಕೆ ಇನ್ನೆಷ್ಟು ಮುಖ್ಯಾಧಿಕಾರಿಗಳು ಬರಲಿದ್ದಾರೆಂಬ ಪ್ರಶ್ನೆ ಮೂಡುವಂತಾಗಿದೆ.
ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ ಅಂಗಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಅಲಿ ಹಾಗೂ ಸದಸ್ಯರು ಭಾಗವಹಿಸಿದ್ದರು.