

ಮೈಸೂರು: ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಎಚ್.ಡಿ.ರೇವಣ್ಣ ಮೇಲಿನ ಆರೋಪಗಳು, ಪೆನ್‌ಡ್ರೈವ್ ಹಂಚಿಕೆ ಮಾಡಿದ ವ್ಯಕ್ತಿಗಳು, ಅದರ ಹಿಂದಿರುವ ರೂವಾರಿಗಳ ವಿರುದ್ಧ ಸೇರಿದಂತೆ ಇಡೀ ಪ್ರಕರಣದ ಕುರಿತು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಆಗ್ರಹಿಸಿದರು.
ವಿಶೇಷ ತನಿಖಾ ದಳ(ಎಸ್‌ಐಟಿ) ರಾಜ್ಯ ಸರ್ಕಾರದ ಅಧೀನದಲ್ಲಿ, ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಬರುತ್ತದೆ. ಹೀಗಾಗಿ ನ್ಯಾಯಾಂಗ ತನಿಖೆಗೆ ಇಡೀ ಪ್ರಕರಣವನ್ನು ಒಪ್ಪಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಪ್ರಜ್ವಲ್ ರೇವಣ್ಣ ಭಾಗಿಯಾಗಿದ್ದಾರೆ ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ಹೊಂದಿದ್ದ ಪೆನ್‌ಡ್ರೈವ್ ಬಿಡುಗಡೆಯ ಹಿಂದಿನ ರೂವಾರಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಹಾಸನದ ಬಿಜೆಪಿ ಮುಖಂಡ ದೇವರಾಜೇಗೌಡ ಆರೋಪಿಸಿದ್ದಾರೆ. ಜತೆಗೆ ಡಿಕೆಶಿ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಆಡಿಯೋ ಸಂಭಾಷಣೆಯನ್ನೂ ಬಹಿರಂಗಪಡಿಸಿದ್ದಾರೆ. ಈ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಪೆನ್‌ಡ್ರೈವ್ ಹಂಚಿಕೆ ಹಿಂದಿರುವ ಡಿ.ಕೆ.ಶಿವಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಇಲ್ಲವೆ ಅವರನ್ನು ಸಚಿವ ಸಂಪುಟದಿಂದಲೇ ವಜಾ ಮಾಡಬೇಕು ಎಂದರು.
ಪ್ರಜ್ವಲ್ ರೇವಣ್ಣನ ಕಾರು ಚಾಲಕ ಕಾರ್ತಿಕ್‌ನನ್ನು ಹೊರದೇಶಕ್ಕೆ ಕಳುಹಿಸಿಕೊಟ್ಟವರು ಡಿಸಿಎಂ. ಆದರೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಲಾಗುತ್ತಿದೆ. ಈ ಪ್ರಕರಣಕ್ಕೂ ಪ್ರಧಾನಿಗೂ ಏನು ಸಂಬಂಧ? ಎಚ್.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಅವರಿಗೂ ಸಂಬಂಧ ಇಲ್ಲ. ಈ ಪ್ರಕರಣದ ಕುರಿತು ಎಚ್.ಡಿ.ದೇವೇಗೌಡರಿಗೆ ಏನೂ ಗೊತ್ತಿಲ್ಲ. ಅವರ ಹೆಸರು ತರುವುದು ಸರಿಯಲ್ಲ ಎಂದು ಹೇಳಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಕಲ್ಪಿಸಬೇಕೆಂದು ಒತ್ತಾಯಿಸಿ, ಸಂತ್ರಸ್ತೆಯ ಅಪಪ್ರಚಾರ ಖಂಡಿಸಿ ಜೆಡಿಎಸ್ ವತಿಯಿಂದ ಮೇ 8ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು. ಅಂತೆಯೇ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲೂ ಅಂದು ಬೆಳಗ್ಗೆ 11ಕ್ಕೆ ಪ್ರತಿಭಟನೆ ನಡೆಯಲಿದೆ ಎಂದು ಜಿಟಿಡಿ ಮಾಹಿತಿ ನೀಡಿದರು.