

ವಿಜಯವಾಣಿ ಸುದ್ದಿಜಾಲ ಉಡುಪಿ
ಭಗವದ್ಗೀತೆಯು ಮತೀಯ ಗ್ರಂಥವಲ್ಲ. ಅದು ಎಲ್ಲರ ಮತಿಯನ್ನು ನಿರ್ದೇಶಿಸುವ ವಿಶ್ವ ಮತೀಯ ಗ್ರಂಥವಾಗಿದ್ದು ಪ್ರತಿಯೊಬ್ಬರೂ ಗೌರವಿಸಬೇಕಿದೆ. ಗೀತೆಯ ಸ್ಫೂರ್ತಿಗೆ ಒಳಗಾಗದವರೇ ಇಲ್ಲ. ಶ್ರೀಕೃಷ್ಣನು ಗೀತೆಯ ರೂಪದಲ್ಲಿ ಸ್ಪಂದಿಸುತ್ತಿದ್ದು, ಅದು ಮಾತನಾಡುವ ಗ್ರಂಥ. ಪ್ರತಿಯೊಬ್ಬರೂ ತಮಗಿರುವ ಸಮಸ್ಯೆ, ಸಂದೇಹವನ್ನು ಗೀತೆಯೊಂದಿಗೆ ಮಾತನಾಡಿ ಉತ್ತರ ಪಡೆಯಬಹುದು ಎಂದು ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ಪ್ರತಿಪಾದಿಸಿದರು.
ಉಡುಪಿಯ ರಾಜಾಂಗಣದಲ್ಲಿ ಶನಿವಾರ (ನ.8) ಆಯೋಜಿಸಿದ್ದ ಒಂದು ತಿಂಗಳ ಪರ್ಯಂತ ನಡೆಯಲಿರುವ ಬೃಹತ್ ಗೀತೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಆಶೀರ್ವಚನ ನೀಡಿದರು.
ಭಗವದ್ಗೀತೆಯ ಗ್ರಂಥವನ್ನು ರಥದಲ್ಲಿ ಸ್ಥಾಪಿಸುವ ಮೂಲಕ ಬೃಹತ್ ಗೀತೋತ್ಸವಕ್ಕೆ ಚಾಲನೆ ನೀಡಿದ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮಾತನಾಡಿ, ಸುಗುಣೇಂದ್ರ ಗುರುಗಳ4ನೇ ಪರ್ಯಾಯದಲ್ಲಿ ಇದು 8ನೇ ಗೀತೋತ್ಸವ. ಅವರ ಜೀವನವೇ ಗೀತಾಪಾಠ. ಸಮಸ್ತ ಲೋಕಕ್ಕೆ ಅಗತ್ಯವಾಗಿರುವ ಗೀತೆಯ ಸಂದೇಶ ಪ್ರಸಾರ ಮಾಡುತ್ತಿದ್ದಾರೆ. ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಬಂದಿದ್ದ ಸಂಕಷ್ಟ ಸ್ಥಿತಿ ಇಂದು ನಮಗೆಲ್ಲರಿಗೂ ಇದೆ. ಜಗತ್ತಿಗೆ ಅನೇಕ ಬಗೆಯ ಮೋಹಗಳು ಕಾಡುತ್ತಿವೆ. ಮೋಹ ಬಂದ ಬಳಿಕ ದೂರ ಮಾಡುವ ಬದಲು ನಿತ್ಯವೂ ಶ್ರೀಕೃಷ್ಣನ ಉಪದೇಶ ಅಳವಡಿಸಿಕೊಂಡರೆ ಯಾರಿಗೂ ಯಾವ ಬಗೆಯ ಮೋಹವೂ ಬರುವುದಿಲ್ಲ. ಮತಿ ಉಳ್ಳವರಿಗೆಲ್ಲ ಭಗವದ್ಗೀತೆಯೇ ಮತೀಯ ಗ್ರಂಥ ಎಂದರು.
ಮಠದ ಶಿಷ್ಯ ಸಮರ್ಥ ಜೋಶಿ ವೇದಘೋಷ ಪಠಿಸಿದರು. ಗೀತೋತ್ಸವದ ಸಂಘಟಕ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿದರು. ಪುತ್ತಿಗೆ ಮಠದ ಸುಗುಣಮಾಲಾ ಪತ್ರಿಕೆಯ ಸಂಪಾದಕ ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್, ಶ್ರೀಗಳ ಕಾರ್ಯದರ್ಶಿ ರತೀಶ್ ತಂತ್ರಿ, ಯೋಗೀಂದ್ರ ಭಟ್, ಪ್ರಮೋದ್ ಇತರರು ಸಹಕರಿಸಿದರು.