

ಬೆಳ್ತಂಗಡಿ: ಬೆಂಗಳೂರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಎರಡು ತಿಂಗಳ ಚಾತುರ್ಮಾಸ್ಯ ವ್ರತಾಚರಣೆ ಪೂರೈಸಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಯೋಧ್ಯೆ ಹಾಗೂ ಚೆನ್ನೈ ಸಂಚಾರ ಮುಗಿಸಿ ಗುರುವಾರ ಮಧ್ಯಾಹ್ನ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದಾಗ ಅವರನ್ನು ಕ್ಷೇತ್ರದ ಆನೆಗಳು ಹಾಗೂ ಸಕಲ ಬಿರುದಾವಳಿಗಳೊಂದಿಗೆ ಸ್ವಾಗತಿಸಲಾಯಿತು.
ಕ್ಷೇತ್ರದ ವತಿಯಿಂದ ಹರ್ಷೇಂದ್ರ ಕುಮಾರ್ ಮಾಲಾರ್ಪಣೆಗೈದು ಬರಮಾಡಿಕೊಂಡರು. ಶ್ರೀಗಳು ಶ್ರೀ ಮಂಜುನಾಥಸ್ವಾಮಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಹೆಗ್ಗಡೆಯವರ ಬೀಡಿನಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಕ್ಷೇತ್ರದ ವತಿಯಿಂದ ಮಣೆಗಾರ್ ವಸಂತ ಮಂಜಿತ್ತಾಯ ನೇತೃತ್ವದಲ್ಲಿ ಶ್ರೀಗಳಿಗೆ ಪಾದಪೂಜೆ, ಮಾಲಿಕೆ ಮಂಗಳಾರತಿ ಬೆಳಗಲಾಯಿತು. ಶ್ರೀಗಳು ಡಾ.ಹೆಗ್ಗಡೆಯವರನ್ನು ಅನುಗ್ರಹಿಸಿದರು. ಹೇಮಾವತಿ ಹೆಗ್ಗಡೆ ಹಾಗೂ ಹರ್ಷೇಂದ್ರ ಕುಮಾರ್ ಅವರನ್ನು ಗೌರವಿಸಿದರು.
ಬಳಿಕ ಸ್ವಾಮೀಜಿ ಶ್ರೀ ಸಾನ್ನಿಧ್ಯ ನೂತನ ಸರತಿ ಸಂಕೀರ್ಣವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ವೀರು ಶೆಟ್ಟಿ, ಸೀತಾರಾಮ ತೋಳ್ಪಡಿತ್ತಾಯ, ರಾಮಕೃಷ್ಣ ಕಲ್ಲೂರಾಯ, ವಸಂತ ಮಂಜಿತ್ತಾಯ, ಪಾರುಪತ್ಯೇಗಾರ ಲಕ್ಷ್ಮೀನಾರಾಯಣ ರಾವ್, ಶ್ರೀನಿವಾಸ ರಾವ್, ಪ್ರದೀಪಕುಮಾರ್ ಕಲ್ಕೂರ, ಜನಾರ್ದನ ಹಂದೆ, ಡಾ.ಎಂ.ಪಿ.ಶ್ರೀನಾಥ್, ರಾಘವೇಂದ್ರ ಭಟ್ ಮದ್ದಡ್ಕ, ಕ್ಷೇತ್ರದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.