ವಿಶ್ವೇಶತೀರ್ಥರಿಗೆ ನುಡಿನಮನ: ಶ್ರೀಗಳು ಹಚ್ಚಿದ ಜ್ಞಾನದೀವಿಗೆ ಎಲ್ಲೆಡೆ ಬೆಳಕಾಗಲಿ, ಪೇಜಾವರಶ್ರೀ ಆಶಯ

Shree 9 jan 20
Published on

ಬೆಂಗಳೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಗುರುಗಳು ಹಚ್ಚಿದ ಜ್ಞಾನ ದೀವಿಗೆ ನಾಡಿನ ಜನರನ್ನು ಸನ್ಮಾರ್ಗದತ್ತ ಕೊಂಡೊಯ್ಯಲಿ ಎಂದು ಪೇಜಾವರದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಆಶಿಸಿದರು.

ಆಖಿಲ ಕರ್ನಾಟಕ ಮಾಧ್ವ ಮಹಾಸಭಾ ಜಯನಗರದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಗಳಿಗೆ ನುಡಿನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಶ್ರೀಗಳು ಇಂದು ನಮ್ಮೆದುರು ದೈಹಿಕವಾಗಿಲ್ಲ. ಆದರೆ ಅವರು ಹಚ್ಚಿದ ಜ್ಞಾನ ದೀವಿಗೆ ಎಲ್ಲೆಡೆ ಬೆಳಕಾಗಿ ಅವರ ಇರುವಿಕೆಯನ್ನು ತೋರಲಿದೆ. ಸಮಾಜದಲ್ಲಿ ಭಗವಂತನನ್ನು ಕಂಡ ಅವರು, ದೇವರು ಗುಡಿಯಲ್ಲಿ ಮಾತ್ರವಲ್ಲ ಎಲ್ಲೆಡೆ ನೆಲೆಸಿದ್ದಾನೆ ಎಂದು ನಾಡಿನಾದ್ಯಂತ ಸಂಚರಿಸಿ ನೊಂದವರ, ದೀನ ದಲಿತರ ಕಷ್ಟಗಳಿಗೆ ಮಿಡಿದರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಮುನ್ನಡೆಯಬೇಕಿದೆ ಎಂದರು.

ಮಂತ್ರಾಲಯ ಮಠ ದೊಂದಿಗೆ ಶ್ರೀಗಳು ಉತ್ತಮ ಬಾಂಧವ್ಯ ಹೊಂದಿದ್ದರು. ಇದೀಗ ಗುರು ಗಳು ನಮ್ಮ ಮೇಲೆ ದೊಡ್ಡ ಹೊರೆ ಹೊರಿಸಿದ್ದಾರೆ. ಅದನ್ನು ಸಮರ್ಥವಾಗಿ ನಿರ್ವಹಿಸಲು ಎಲ್ಲರ ಸಹಕಾರ, ಬೆಂಬಲದ ಅಗತ್ಯವಿದೆ ಎಂದು ಹೇಳಿದರು.

ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಪೇಜಾವರಶ್ರೀಗಳು ಒಂದು ಪ್ರದೇಶ, ಒಂದು ಭಾಷೆ, ಒಂದು ಪ್ರಾಂತ್ಯಕ್ಕೆ ಸೀಮಿತವಾಗಿರದೆ ಭಾರತದ ಮೂಲೆ ಮೂಲೆಗಳಲ್ಲಿ ಸಂಚರಿಸಿ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ್ದರು. ನೊಂದವರ ಕಷ್ಟಗಳಿಗೆ ಸ್ಪಂದಿಸಿದ್ದರು. ರಾಜಕೀಯ ಕ್ಷೇತ್ರದಲ್ಲಿ ಧರ್ಮಗುರುಗಳಾಗಿದ್ದ ಅವರು, ಈ ನಾಡಿಗೆ ವಿದ್ವಾಂಸರ ತಂಡವನ್ನೇ ಕೊಡುಗೆಯಾಗಿ ನೀಡಿದ್ದಾರೆ. ಆಕಾರ ದಲ್ಲಿ ವಾಮನಮೂರ್ತಿಯಾಗಿದ್ದರೂ, ವಿಚಾರಗಳು ಹಾಗೂ ಕಾರ್ಯಗಳ ಮೂಲಕ ತ್ರಿವಿಕ್ರಮರಾಗಿದ್ದರು ಎಂದು ಸ್ಮರಿಸಿದರು.

ಮಂತ್ರಾಲಯ ಮಠದ ಶ್ರೀ ಡಾ. ರಾಜ ಗಿರಿಯಾಚಾರ್ ಮಾತನಾಡಿ, ಕತೃತ್ವದ ಜತೆಗೆ ಸೌಜನ್ಯವನ್ನೂ ಹೊಂದಿದ್ದ ಶ್ರೀಗಳು ಸದಾ ಚಟುವಟಿಕೆಯಿಂದ ಇರುತ್ತಿದ್ದರು. ಹಿಂದು ಧರ್ಮದ ಸಂಘಟನೆಗಾಗಿ ಶ್ರಮಿಸಿದ್ದರು ಎಂದರು.

ಯಾದಗಿರಿಯ ಶ್ರೀ ಕಣ್ವ ಮಠದ ಶ್ರೀ ವಿದ್ಯಾ ಕಣ್ವ ವೀರಾಜ್ ತೀರ್ಥರು, ಶಾಸಕ ಉದಯ ಗರುಡಾಚಾರ್, ಆಖಿಲ ಕರ್ನಾಟಕ ಮಾಧ್ವ ಮಹಾಸಭಾ ಕೋಶಾಧ್ಯಕ್ಷ ಡಾ. ಕೃ.ವೆಂ. ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷ ವ್ಯಕ್ತಿತ್ವದ ಪೇಜಾವರ ಶ್ರೀಗಳು ನೊಂದವರ ಧ್ವನಿಯಾಗಿದ್ದರು. ದೇಶದಲ್ಲಿ ನೂರಾರು ಮಠಗಳಿದ್ದು, ತಮ್ಮ ಸಮಾಜ ಹಾಗೂ ಮಠಕ್ಕೆ ಸೀಮಿತವಾಗಿವೆ. ಆದರೆ ಶ್ರೀಗಳು ಎಲ್ಲ ವರ್ಗದವರಿಗೂ ಸ್ಪಂದಿಸುವ ಮೂಲಕ ರಾಷ್ಟ್ರಗುರುಗಳಾಗಿದ್ದರು. | ರಾಮಲಿಂಗಾರೆಡ್ಡಿ ಮಾಜಿ ಸಚಿವ

ಇಂದು ಯತಿಗಳ ಸಮಾವೇಶ

ಬೆಂಗಳೂರು: ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀ ವಿಶ್ವೇಶತೀರ್ಥ ಸಭಾ ಮಂಟಪದಲ್ಲಿ ಗುರುವಾರ (ಜ.9) ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಯತಿಗಳ ಸಮಾವೇಶ ನಡೆಯಲಿದೆ. ಇದಕ್ಕೂ ಮುನ್ನ ಹೋಮ, ಭಜನೆ, ಪಾರಾಯಣ, ಶ್ರೀ ರಾಮವಿಠಲ ದೇವರ ಪೂಜೆ ಇರಲಿದೆ.

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥರು, ಭಂಡಾರಕೇರಿ ಮಠದ ವಿದ್ಯೇಶ ತೀರ್ಥರು, ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥರು, ಸೋಸಲೆ ಮಠದ ಶ್ರೀ ವಿದ್ಯಾಶ್ರೀಶ ತೀರ್ಥರು ಹಾಗೂ ಭೀಮಸೇತು ಮುನಿ ವೃಂದ ಮಠದ ಶ್ರೀ ರಘುವರೇಂದ್ರ ಶ್ರೀಪಾದರು ಸಾನ್ನಿಧ್ಯ ವಹಿಸುವರು.

ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಉಪನ್ಯಾಸ ನೀಡುವರು. ಸಂಜೆ 6ರಿಂದ 8 ರವರೆಗೆ ಮಂತ್ರಾಲಯ ಮಠದ ಶ್ರೀಸುಬುಧೇಂದ್ರ ತೀರ್ಥರು ಮತ್ತಿತರರು ಇರುವರು. ಮಂತ್ರಾಲಯ ಗುರುಸಾರ್ವಭೌಮ ವಿದ್ಯಾಪೀಠದ ಡಾ. ವಾದಿರಾಜಾಚಾರ್ಯ ಉಪನ್ಯಾಸ ನೀಡುವರು.

10 ಸಾವಿರ ಜನ ನಿರೀಕ್ಷೆ: ಜ.9 ಹಾಗೂ 11ರಂದು ನಡೆವ ಯತಿ ಸಮಾವೇಶ ಹಾಗೂ ಶ್ರೀ ವಿಶ್ವೇಶತೀರ್ಥರ ಗುರುವಂದನಾ ಕಾರ್ಯಕ್ರಮಕ್ಕೆ 10 ಸಾವಿರಕ್ಕೂ ಹೆಚ್ಚು ಜನ ಬರುವ ನಿರೀಕ್ಷೆ ಇರುವುದಾಗಿ ವಿದ್ವಾಂಸ ಎ. ಹರಿದಾಸ ಭಟ್ಟ ತಿಳಿಸಿದ್ದಾರೆ. ಗುರು ಸಂಸ್ಮರಣಾ ಅಂಗವಾಗಿ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಮಧ್ಯಾಹ್ನ ಹಸ್ತೋದಕ ಮತ್ತು ತೀರ್ಥಪ್ರಸಾದ ಇರಲಿದೆ. ಜಾಲಹಳ್ಳಿ ಕೊಳೆಗೇರಿಯಲ್ಲಿ ಬಡವರಿಗೆ ಊಟದ ವ್ಯವಸ್ಥೆ ಮಾಡಿರುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net