

ತುಮಕೂರು: ಮನುಷ್ಯ ಸಮಾಜದಿಂದ ಪಡೆದಿದ್ದನ್ನು ದಾನ ಮಾಡುವ ಗುಣ ಬೆಳೆಸಿಕೊಳ್ಳಬೇಕು, ಆ ಮೂಲಕ ಸಮಾಜಕ್ಕೆ ಹಿಂತಿರುಗಿಸುವುದು ಆತನ ಕರ್ತವ್ಯವಾಗಬೇಕು ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳು ಹೇಳಿದರು.
ನಗರದಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನವೀಕೃತಗೊಂಡಿರುವ ಶ್ರೀಕೃಷ್ಣ ಮಂದಿರವನ್ನು ಗುರುವಾರ ಉದ್ಘಾಟಿಸಿ, ಆಶೀರ್ವಚನ ನೀಡಿದ ಅವರು, ಸಮಾಜಕ್ಕೆ ಕೊಡುವುದು ಆತನ ಕರ್ತವ್ಯ ಹೌದು, ಆ ಮೂಲಕ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದರು.
ಮನುಷ್ಯ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ ಪಡೆಯುವುದು ಪ್ರತಿಯೊಬ್ಬರ ಗುರಿಯಾಗಿದೆ. ಅದು ತಪ್ಪಲ್ಲ ಆದರೆ, ಅದನ್ನು ಪಡೆಯಲು ಅನುಸರಿಸುವ ಮಾರ್ಗ ಮುಖ್ಯವಾಗಿದೆ, ಭಗವಂತನ ಆರಾಧನೆಯ ಜತೆ ನ್ಯಾಯೋಚಿತ ಮಾರ್ಗದಲ್ಲಿ ಸಂಪಾದನೆ ಮಾಡಬೇಕು, ಮತ್ತೊಬ್ಬರಿಗೆ ಹಾನಿ ಮಾಡದಂತೆ ಬದುಕಬೇಕು ಎಂದರು. ಸಂಪಾದನೆಯ ಒಂದು ಭಾಗವನ್ನು ಸಮಾಜದ ಉದ್ಧಾರಕ್ಕೆ, ಮತ್ತೊಬ್ಬರ ಏಳ್ಗೆಗೆ ಬಳಸಬೇಕು, ಹಾಗಾದಾಗ ಜೀವನದಲ್ಲಿ ಸಂತೃಪ್ತಿ ಹಾಗೂ ನೆಮ್ಮದಿ ಕಾಣಬಹುದು ಎಂದರು.
ಪ್ರತಿಯೊಬ್ಬರಲ್ಲೂ ದೇವರನ್ನು ಕಂಡು ಆರಾಧಿಸಬೇಕು, ಆ ಕಾರ್ಯವನ್ನು ಪೇಜಾವರ ಮಠದ ಹಿರಿಯ ಶ್ರೀಗಳು ಜೀವಿತಾವಧಿಯಲ್ಲಿ ಮಾಡಿ, ಮತ್ತೊಬ್ಬರಿಗೆ ಮಾದರಿಯಾದರು. ಜತೆಗೆ ಅನೇಕ ಸಮಾಜಮುಖಿ ಕಾರ್ಯ ಮಾಡಿದರು ಎಂದರು. ಕೃಷ್ಣಮಂದಿರದ ನವೀಕರಣಕ್ಕೆ ಸಹಕರಿಸಿದವರಿಗೆ ಶ್ರೀಗಳು ಗೌರವಿಸಿದರು.
ಭರದಿಂದ ಸಾಗಿದೆ ರಾಮಮಂದಿರ ನಿರ್ಮಾಣ: ಸುದ್ದಿಗಾರರ ಜತೆ ಮಾತನಾಡಿದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು, ಪ್ರಧಾನಿ ಮೋದಿ ಅವರು ಶ್ರೀಕ್ಷೇತ್ರ ಧರ್ಮಸ್ಥಳದ ಡಾ.ವೀರೇಂದ್ರ ಹೆಗ್ಗಡೆ ಅವರ ಧಾರ್ಮಿಕ, ಶೈಕ್ಷಣಿಕ, ಆಧ್ಯಾತ್ಮಿಕ ಹಾಗೂ ಆರ್ಥಿಕ ಸೇವೆ ಪರಿಗಣಿಸಿ, ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಅವರ ಸೇವೆ ರಾಷ್ಟ್ರಕ್ಕೆ ಸಲ್ಲಿಕೆಯಾಗುವಂತೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ, ಕರ್ನಾಟಕದಿಂದ ಹೋಗಿರುವ ಶಿಲೆಯಿಂದ ರಾಮಮಂದಿರದ ಪೀಠದ ಕಾಮಗಾರಿ ಆರಂಭಗೊಂಡಿದೆ. ಮುಂದಿನ ಉತ್ತರಾಯಣ ಪುಣ್ಯಕಾಲದ ವೇಳೆ ಗರ್ಭಗುಡಿಯ ಕೆಲಸ ಆರಂಭಗೊಳ್ಳಲಿದ್ದು, ಶೀಘ್ರವಾಗಿ ರಾಮಮಂದಿರ ಕಾರ್ಯ ಪೂರ್ಣಗೊಳ್ಳಲಿದೆ ಎಂದರು. ಶ್ರೀಪೇಜಾವರ ವಿಶ್ವೇಶ್ವರ ತೀರ್ಥ ಶ್ರೀಗಳು ಜೀವಿತ ಅವಧಿಯಲ್ಲಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಅವರ ಕನಸನ್ನು ನನಸು ಮಾಡುವ ದೃಷ್ಟಿಯಿಂದ ಒಂದನೇ ತರಗತಿಯಿಂದ ಪದವಿವರೆಗಿನ ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಜತೆಗೆ 100 ಬೆಡ್‌ಗಳ ಉಚಿತ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆದಿದೆ, ಭಕ್ತರ ಸಹಕಾರದಿಂದ ಈ ಎಲ್ಲ ಕಾರ್ಯ ನಡೆಯಲಿವೆ ಎಂದರು.