

ಉಡುಪಿ: ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿ ಡಿ.17ರಂದು ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಯವರ ಪ್ರಥಮ ಮಹಾಸಮಾರಾಧನೆ ನಡೆಯಲಿದೆ.
ವೃಂದಾವನ ಪ್ರತಿಷ್ಠಾಪನೆ ಪೂರ್ವಭಾವಿಯಾಗಿ ಡಿ.10ರಿಂದ 18ರವರೆಗೆ ವಿದ್ಯಾಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಪ್ರವಚನಗಳನ್ನು ಹಮ್ಮಿಕೊಳ್ಳಲಾಗಿದೆ. ಪೂರ್ವಾರಾಧನೆ ಪ್ರಯುಕ್ತ ಬುಧವಾರ ತ್ರಯೋದಶ ಕುಂಡಗಳಲ್ಲಿ ವಿರಜಾ ಮಂತ್ರ ಹೋಮ, ಅಷ್ಟ ಮಹಾಮಂತ್ರ ಹೋಮ, ವೈದಿಕ ಮಂತ್ರ ಹೋಮ, ವಿಶ್ವಕರ್ಮ ಸೂಕ್ತ ಹೋಮ, ವಿಷ್ಣುಸೂಕ್ತ ಹೋಮ, ಬಿಂಬನ್ಯಾಸ, ಅಂಕುರದೇವತಾ ಪೂಜೆ ನಡೆಯಿತು. ಸಾಯಂಕಾಲ ಮಂಡಲಾರಾಧನೆ, ಕುಂಭಸಂಸ್ಕಾರ, ಬಿಂಬಶಯ್ಯಧಿವಾಸ, ಅಷ್ಟಾವಧಾನ ಸೇವೆ, ರತ್ನನ್ಯಾಸ, ರಾತ್ರಿ ಜಾಗರಣೆ, ನಿರಂತರ ಭಜನೆ ನೆರವೇರಿತು.
ಇಂದು ಪ್ರತಿಷ್ಠಾಪನೆ: 35 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಶಿಲಾಮಯ ಗುಡಿಯಲ್ಲಿ ವಿಶ್ವೇಶ ತೀರ್ಥರ ಮೂಲವೃಂದಾವನ ಹಾಗೂ ಗುರು ವಿದ್ಯಾಮಾನ್ಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನಾ ಕಾರ್ಯ ಗುರುವಾರ ನಡೆಯಲಿದೆ.
ಮುಂಜಾನೆ ಪ್ರತಿಷ್ಠಾಪನಾ ಕಲಶ ಸ್ಥಾಪನೆ, ಪ್ರತಿಷ್ಠಾಪನಾ ಹೋಮ, ಕಲಶಾಧಿವಾಸ ಹೋಮ, ಅಷ್ಟಬಂಧ ಹೋಮ, ವಿಷ್ಣುಗಾಯತ್ರೀ ಹೋಮ. ಬಳಿಕ ಪ್ರಾತಃ 6.30ಕ್ಕೆ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ವೃಂದಾವನರೂಪಿ ನಾರಾಯಣ ಪ್ರತಿಷ್ಠಾಪನೆ, ಶಾಂತಿಮಂತ್ರ ಪಠಣ, ಅಷ್ಟಬಂಧಲೇಪನ, ಕಲಶಾಭಿಷೇಕ, ಅಲಂಕಾರ ಪೂಜೆ, ಉಭಯ ಶ್ರೀಗಳಿಂದ ಪಟ್ಟದದೇವರ ಪೂಜೆ, ದ್ವಾದಶಮೂರ್ತಿ ಆರಾಧನೆ, ಯತಿಹಸ್ತೋದಕ ನಡೆಯಲಿದೆ. ರಾತ್ರಿ ದೀಪಾರಾಧನೆ, ಅಷ್ಟಾವಧಾನ ಸೇವೆ ಜರುಗಲಿದೆ.
ನಾಳೆ ಉತ್ತರಾರಾಧನೆ: ಡಿ.18ರಂದು ಉತ್ತರಾರಾಧನೆ ನಡೆಯಲಿದ್ದು, ಮಹಾಸಂಪ್ರೋಕ್ಷಣೆ, ದ್ವಾದಶ ಕಲಶಾಧಿವಾಸ ಹೋಮ, ಶ್ರೀಗಳಿಂದ ಪಟ್ಟದದೇವರ ಪೂಜೆ, ಮಹಾಪೂಜೆ, ಕ್ಷಮಾಪರಾಧಪೂರ್ವಕ ಕರ್ಮಸಮರ್ಪಣೆ, ಚತುರ್‌ಮೂರ್ತಿ ಆರಾಧನೆ, ಹಸ್ತೋದಕ, ಮಹಾಮಂತ್ರಾಕ್ಷತೆ ನೆರವೇರಲಿದೆ.
ಸಾರ್ವಜನಿಕ ಕಾರ್ಯಕ್ರಮ ಇಲ್ಲ: ಕೋವಿಡ್-19 ನಿಯಮದಂತೆ ಸಾರ್ವಜನಿಕ ಕಾರ್ಯಕ್ರಮ ಇರುವುದಿಲ್ಲ. ಆರಾಧನಾ ಕಾರ್ಯಕ್ರಮವನ್ನು ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು. ಸಾಯಂಕಾಲ 4ರಿಂದ ರಾತ್ರಿ 9ರವರೆಗೆ ವೃಂದಾವನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿದೆ.
ಉಡುಪಿಯಲ್ಲೂ ಕಾರ್ಯಕ್ರಮ: ಉಡುಪಿ ಕೃಷ್ಣ ಮಠ ರಾಜಾಂಗಣದಲ್ಲಿ ಗುರುವಾರ ಬೆಳಗ್ಗೆ 10.30ಕ್ಕೆ ಶ್ರೀ ವಿಶ್ವೇಶತೀರ್ಥರ ಪ್ರಥಮ ಆರಾಧನೆ ಪ್ರಯುಕ್ತ ವಿಶೇಷ ಸಂಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಕಾಣಿಯೂರು ಮಠ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿ, ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ, ಪರ್ಯಾಯ ಅದಮಾರು ಮಠ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಭಾಗವಹಿಸಲಿದ್ದಾರೆ. ಸಗ್ರಿ ರಾಘವೇಂದ್ರ ಉಪಾಧ್ಯಾಯ ಸಂಪಾದಿತ ವಿಶ್ವೇಶತೀರ್ಥ ಶ್ರೀಪಾದರ ಕುರಿತ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.