ನವದೆಹಲಿಯಿಂದ ಆಗಮಿಸಿದ ಪೇಜಾವರ ಶ್ರೀಗಳಿಗೆ ಮಂಗಳೂರಿನಲ್ಲಿ ಸ್ವಾಗತ

mng-nov11-kalkura1
Published on

ಮಂಗಳೂರು: ಹರಿಪಾದ ಸೇರಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪರವಾಗಿ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಿದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು ಗುರುವಾರ ಮುಂಜಾನೆ ಮಂಗಳೂರಿಗೆ ಆಗಮಿಸಿದರು. ಈ ವೇಳೆ ಕಲ್ಕೂರ ಪ್ರತಿಷ್ಠಾನ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಅವರರನ್ನು ಸ್ವಾಗತಿಸಿ, ಗೌರವಿಸಲಾಯಿತು.
ಕದ್ರಿ ಮಂಜುಪ್ರಾಸಾದದ ವರೆಗೆ ಶ್ರೀಗಳನ್ನು ಮೆರವಣಿಗೆಯಲ್ಲಿ ಕರೆತಂದು ಗೌರವಾರ್ಪಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಗುರುಗಳಿಗೆ ಪ್ರಶಸ್ತಿ ಇಷ್ಟವಿರಲಿಲ್ಲ, ಆದರೆ ನಾವು ಗುರುಗಳಿಗೆ ಪ್ರಶಸ್ತಿ ದೊರೆಯುವ ನಿರೀಕ್ಷೆಯಲ್ಲಿದ್ದೆವು. ಗುರುಗಳ ವ್ಯಕ್ತಿಗತ ಗುಣವನ್ನು ಪರಿಗಣಿಸಿ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿದೆ. ಅವರಿಗೆ ದೊರೆತ ಪದ್ಮವಿಭೂಷಣ ಹೆಚ್ಚು ಮಹತ್ವವಾದುದು. ಈ ವೇಳೆ ಗುರುಗಳು ಇರಬೇಕಿತ್ತು ಎಂದು ಸ್ವತಃ ರಾಷ್ಟ್ರಪತಿಗಳೇ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಹೇಳಿದರು ಎಂದರು.
ಕರ್ನಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್., ಪಿ. ಜಯರಾಮ ಭಟ್, ವಿಹಿಂಪ ಪ್ರಾಂತ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್, ಪ್ರಮುಖರಾದ ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ ಕಲ್ಕೂರ, ಭುವನಾಭಿರಾಮ ಉಡುಪ, ಕದ್ರಿ ನವನೀತ ಶೆಟ್ಟಿ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net