ದೆಹಲಿಯಲ್ಲಿ ಎರಡು ದಿನ ಸಮಾವೇಶ: ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

pejavara new
Published on

ಬೆಳ್ತಂಗಡಿ: ನವೆಂಬರ್ 10 ಮತ್ತು 11ರಂದು ಶ್ರೀರಾಮ ಜನ್ಮ ಭೂಮಿ ಕುರಿತು ದೆಹಲಿಯಲ್ಲಿ ಎರಡು ದಿನಗಳ ಸಮಾವೇಶ ನಡೆಯಲಿದ್ದು, ಮಂದಿರದ ಮುಂದಿನ ಅಭಿಯಾನ ಹೇಗೆ ನಡೆಯಬೇಕು ಎಂಬುದರ ಕುರಿತಾಗಿ ಚರ್ಚೆ ನಡೆಯಲಿದೆ ಎಂದು ಅಯೋಧ್ಯೆ ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜತೆ ಚರ್ಚೆ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ 53ನೇ ಪಟ್ಟಾಭಿಷೇಕ ಪ್ರಯುಕ್ತ ಅಭಿನಂದನೆ ಸಲ್ಲಿಸಲು ಹಾಗೂ ಕೃಷ್ಣಾನುಗ್ರಹ ಪ್ರಾರ್ಥನೆ ಮಾಡುವುದಗೋಸ್ಕರ ಧರ್ಮಸ್ಥಳಕ್ಕೆ ಬಂದಿದ್ದು, ವಿಜಯ ದಶಮಿ ದಿನ ಉಡುಪಿಯಲ್ಲಿ ಪೂಜೆ ಮುಗಿಸಿ, ಸಮಾವೇಶದಲ್ಲಿ ಭಾಗವಹಿಸಲು ದೆಹಲಿಗೆ ತೆರಳಲಿರುವುದಾಗಿ ತಿಳಿಸಿದರು.

ಉತ್ತರ ಭಾರತಕ್ಕೆ ತೆರಳುವ ಭಕ್ತರಿಗೆ ಸಹಾಯವಾಗಲು, ತೀರ್ಥ ಕ್ಷೇತ್ರ ಸಂದರ್ಶಿಸುವ ಸಂದರ್ಭ ಕರ್ನಾಟಕದಿಂದ ಬರುವ ಭಕ್ತರಿಗೆ ಉಳಿದುಕೊಳ್ಳಲು ಅನುಕೂಲವಾಗಬೇಕು ಎಂದು ಗುರುಗಳಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅಲ್ಲಲ್ಲಿ ಛತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಗುರುಗಳ ಕಾಲಾನಂತರ ಅಲ್ಲಿ ಹೋಗಿ ವ್ಯವಸ್ಥೆಗಳನ್ನು ನೋಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕೂಡ ಕಾಶಿ, ಅಯೋಧ್ಯೆ, ಹರಿದ್ವಾರ, ಬದರಿ ಮೊದಲಾದ ತೀರ್ಥ ಕ್ಷೇತ್ರಗಳಲ್ಲಿ ಸಂಚಾರ ಮಾಡಿಕೊಂಡು ಬರಲಿರುವುದಾಗಿ ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net