

ಉಡುಪಿ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಗಳನ್ನು ವಿಶೇಷ ಒತ್ತಡಗಳಿಲ್ಲದೆ ಮತ್ತಷ್ಟ್ಟು ದೃಢಗೊಳಿಸುವ ನಿಟ್ಟಿನಲ್ಲಿ ಅಧಿಕ ಶ್ರಾವಣ ಮಾಸದಲ್ಲಿ ಹಮ್ಮಿಕೊಂಡ ರಾಮಜಪ ಅಭಿಯಾನ ಯಶಸ್ವಿಯಾಗಿದ್ದು, ರಾಜ್ಯದ 30 ಕ್ಕೂ ಅಧಿಕ ಜಿಲ್ಲೆಗಳ 880 ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳ ಸುಮಾರು 6 ಲಕ್ಷಕ್ಕೂ ಅಧಿಕ ಮಕ್ಕಳ ಬಾಯಲ್ಲಿ ಕೋಟಿ ಕೋಟಿ ಸಂಖ್ಯೆಯಲ್ಲಿ ಸಾಮೂಹಿಕ ರಾಮಜಪದ ಕಲರವ ಅನುರಣಿಸಿರುವುದು ಉಲ್ಲೇಖನೀಯ.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿಮಾರ್ಣದ ಶತಮಾನಗಳ ಕನಸು ನನಸಾಗುತ್ತಿದೆ .ಆದ್ದರಿಂದ ನೂತನ ಮಂದಿರದಲ್ಲಿ ಶ್ರೀರಾಮನ ಪ್ರತಿಷ್ಠ್ಠಾಪನೆಯ ವರೆಗೆ ದೇಶದಲ್ಲಿ ಎಲ್ಲ ವಯೋಮಾನದ , ಎಲ್ಲ ಜಾತಿ ಸಮುದಾಯಗಳ , ವಿವಿಧ ವೃತ್ತಿ ಕ್ಷೇತ್ರಗಳ ಹಿಂದುಗಳಿಂದ ರಾಮನ ವಿಶೇಫಿ ಸ್ಮರಣೆ , ಸೇವಾಕಾರ್ಯಗಳು ಮುಂತಾದವು ನಿರಂತರ ನಡೆಯುವಂತಾಗಬೇಕೆಂದು ಅಯೋಧ್ಯಾ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿಶ್ವಸ್ಥ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮನದ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ಅಭೂತಪೂರ್ವ ಬೆಂಬಲ ಲಭಿಸಿದ್ದು, ಶಾಲಾ&ಕಾಲೇಜು, ಸಂ ಸಂಸ್ಥೆಗಳು ಅಭಿಯಾನದಲ್ಲಿ ಕೈಜೋಡಿಸಿವೆ. ಸಾವಿರಾರು ಮಂದಿ ರಾಮನಾಮ ಜಪದಲ್ಲಿ ಭಾಗಿಯಾಗಿದ್ದಾರೆ.
ಯಾವುದೇ ಖರ್ಚಿಲ್ಲದೇ ಅತ್ಯಂತ ಸರಳವಾಗಿ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಒಂದು ತಿಂಗಳ ಕಾಲ ನಿತ್ಯ 108 ಬಾರಿ ಶ್ರೀರಾಮಜಯ ರಾಮ ಜಯ ಜಯ ರಾಮ ಎಂಬ ಮಂತ್ರವನ್ನು ಜಪಿಸಿ ಕೊನೆಗೆ ಲೋಕದ ಒಳಿತಿಗಾಗಿ ಸಾಮೂಹಿಕವಾಗಿ ಪ್ರಾರ್ಥಿಸುವ ಈ ಸರಳ ವಿಧಿಗೆ ಕೇವಲ ಹತ್ತರಿಂದ ಹದಿನೈದು ನಿಮಿಷ ಸಾಕು. ತಮ್ಮ ಸಂಸ್ಥೆಗಳಲ್ಲಿ ಈ ಸಾಮೂಹಿಕ ಜಪಯಜ್ಞವನ್ನು ನಡೆಸುವಂತೆ ರಾಜ್ಯದ ಅನೇಕ ಪ್ರಸಿದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳು , ವಿವಿಧ ಸಂಘ ಸಂಸ್ಥೆಗಳ ಪ್ರಮುಖರಿಗೆ ಪತ್ರ ಮುಖೇನ ಶ್ರೀಗಳು ಸೂಚಿಸಿದ್ದರು. ಶ್ರೀಗಳ ಮನವಿಗೆ ಭರಪೂರ ಸ್ಪಂದನೆ ದೊರಕಿದೆ.
ಕೆಲವು ಶಾಲೆಗಳಲ್ಲಿ ಪೂರ್ತಿ ಒಂದು ತಿಂಗಳು ಈ ಜಪಯಜ್ಞ ನಡೆದರೆ ಕೆಲವರು ಒಂದು ವಾರ, ಹತ್ತು ದಿನ ಹೀಗೆ ನಡೆಸಿದ್ದಾರೆ. ಸಂಘ ಪರಿವಾರದ ಸಂಘಟನೆಗಳು , ಬಾಲಗೋಕುಲಗಳು , ಭಜನಾಮಂದಿರಗಳಲ್ಲೂ ಈ ಜಪಯಜ್ಞ ನಡೆಯುತ್ತಿವೆ. ಹೀಗೆ ದಶಕೋಟಿ ರಾಮನಾಮ ಜಪ ಯಜ್ಞವು ಗುರಿ ಮೀರಿ ಶತಕೋಟಿಯೆಡೆಗೆ ಸಾಗುತ್ತಿದೆ. ರಾಜ್ಯದಲ್ಲಿ ಇದೊಂದು ದಾಖಲೆಯೆನ್ನಬಹುದು ಎನ್ನುತ್ತಾರೆ ಕಾರ್ಯಕ್ರಮ ಸಂಯೋಜಕ ಜಿ ವಾಸುದೇವ ಭಟ್ ಪೆರಂಪಳ್ಳಿ.