ಮೈಸೂರು ಕೇಂದ್ರ ಕಾರಾಗೃಹದಲ್ಲಿ ಖೈದಿಗಳಿಗೆ ರಾಮ ಮಂತ್ರ ಬೋಧನೆ

udp-29-pejavara
Published on

ಉಡುಪಿ: ಮಾನವರು ಸಂಘ ಜೀವಿಗಳು. ಎಲ್ಲರೂ ಸುಖ ಸಂತೋಷಕ್ಕಾಗಿ ಹಂಬಲಿಸುತ್ತೇವೆ . ಆದರೆ ಕೆಲವು ಬಾರಿ ನಮ್ಮ ಸುಖ ಸಂತೋಷಕ್ಕಾಗಿ ಅನ್ಯರಿಗೆ ಕಷ್ಟ-ದು:ಖ ಕೊಡುತ್ತೇವೆ . ಇದಕ್ಕಾಗಿ ಕೆಟ್ಟ ಕೆಲಸಗಳಿಗೂ ಮುಂದಾಗುತ್ತೇವೆ. ಅದರಿಂದಾಗಿ ಸಮಾಜದಲ್ಲಿ ಅಶಾಂತಿ ಅಪರಾಧಗಳು ನಡೆಯುತ್ತವೆ. ಆದ್ದರಿಂದ ನಮ್ಮಸಂತೋಷ ಅನ್ಯರ ಸಂತೋಷಕ್ಕೂ ಕಾರಣವಾಗುವ ಸತ್ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು. ಒಳಿತಾಗದಿದ್ದರೂ ಕೆಡುಕಾಗದಂತೆ ಎಚ್ಚರ ವಹಿಸಬೇಕು. ಇದರಿಂದ ಇಹದಲ್ಲೂ ಪರದಲ್ಲೂ ನಮಗೆಲ್ಲ ಶ್ರೇಯಸ್ಸಿದೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.

ಶುಕ್ರವಾರ ಮೈಸೂರಿನ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಲಯನ್ಸ್​ ಕ್ಲಬ್​ , ರೋಟರಿ ಕ್ಲಬ್​ , ರೋಟರಿ ಇನ್ನರ್​ ವೀಲ್​ ಕ್ಲಬ್​ ಗಳ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವಿವಿಧ ಸವಲತ್ತು ವಿತರಣೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ, ಖೈದಿಗಳಿಗೆ ರಾಮ ಮಂತ್ರ ಬೋಧಿಸಿ ಸಂದೇಶ ನೀಡಿದರು.

ಬೇಟೆ , ದರೋಡೆ ಮೊದಲಾದ ಕೆಲಸಗಳಲ್ಲಿಯೇ ಬದುಕುತ್ತಿದ್ದ ವಾಲ್ಮೀಕಿ ಒಂದು ತಿರುವಿನಿಂದ ತಿಳಿವಳಿಕೆ ಪಡೆದು ರಾಮಮಂತ್ರವನ್ನು ಜಪಿಸುತ್ತಾ ರಾಮಾಯಣವನ್ನೇ ರಚಿಸಿ, ಇವತ್ತು ಲೋಕವೆಲ್ಲ ಪೂಜಿಸುವ ಮಹರ್ಷಿಯಾಗಿದ್ದಾನೆ. ಇದು ನಮಗೆ ಮಾದರಿಯಾಗಬೇಕು . ನಿತ್ಯ ಜೀವನದಲ್ಲಿ ರಾಮನಾಮ ಸ್ಮರಣೆ ಮಾಡಿದರೆ ಜೀವನ ಪಾವನವಾಗುತ್ತದೆ ಎಂದು ಹೇಳಿದರು.

ತಿಳಿದೋ ತಿಳಿಯದೆಯೋ ಅಪರಾಧಗಳು ನಡೆಯುತ್ತವೆ. ನಾಗರಿಕ ಸಮಾಜದ ನಿಯಮಾನುಸಾರ ಶಿಕ್ಷೆ ಅನುಭವಿಸಬೇಕಾಗುತ್ತದೆ. ಆದರೆ ಶಿಕ್ಷೆ ಅನುಭವಿಸಿ ಹೊರಗೆ ಬರುವಾಗ ನಮ್ಮ ಅಂತ:ಸಾಕ್ಷಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಟಾಗ ಪರಿಶುದ್ಧರಾಗಲು ಸಾಧ್ಯವಿದೆ ಎಂದು ಹೇಳಿದರು.
ಜಿಲ್ಲಾ ಕೇಂದ್ರ ಕಾರಾಗೃಹ ಅಧೀಕ್ಷಕ ಪಿ.ಎಸ್​ ರಮೇಶ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net