

ಉಡುಪಿ:ಗುರುಗಳಾದ ವಿಶ್ವೇಶತೀರ್ಥರು ಸಮಾಜದ ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ ಹೋಗುತ್ತಿದ್ದರು. ನೆರೆಹಾವಳಿ ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸಂಗೀತ ನಿರ್ದೇಶಕ ಹಂಸಲೇಖ ಪೇಜಾವರಶ್ರೀಗಳ ದಲಿತ ಕೇರಿಗೆ ಭೇಟಿಗೆ ಟೀಕೆ ವ್ಯಕ್ತಪಡಿಸಿದ ಬಗ್ಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಮಾತು ಹಂಸಲೇಖ ಬಾಯಿಂದ ಬರಬಾರದಿತ್ತು. ಸಮಾಜ ಅವರನ್ನು ಗೌರವಿಸುತ್ತದೆ. ಪ್ರಚಾರಕ್ಕೋಸ್ಕರ ಸಾಕಷ್ಟು ಮಂದಿ ಹೀಗೆ ಮಾಡುತ್ತಾರೆ. ಹಂಸಲೇಖ ಅವರಿಗೆ ಈ ರೀತಿಯಲ್ಲಿ ಪ್ರಚಾರ ಬೇಕಾಗಿರಲಿಲ್ಲ ಎಂದರು.
ಯಾರೋ ಏನೋ ಅಂದ ಮಾತ್ರಕ್ಕೆ ನಮ್ಮ ಕೆಲಸ ನಿಲ್ಲಿಸುವುದಿಲ್ಲ. ಯಾರ ಹೊಗಳಿಕೆಗೂ ನಾವು ಈ ಕೆಲಸವನ್ನು ಮಾಡಿದ್ದಲ್ಲ. ದಲಿತರ ಜೊತೆ ನಾವು ಇದ್ದೇವೆ, ದಲಿತರು ನಮ್ಮಿಂದ ಹೊರತಲ್ಲ ಎಂಬ ಐಕ್ಯ ಸಂದೇಶ ನೀಡುವ ಸಲುವಾಗಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಗುರುಗಳ ಅಭಿಮಾನದಿಂದ ಯಾರಾದರೂ ಪ್ರತಿಭಟಿಸಿದರೆ ಅದು ಅವರವರ ವೈಯಕ್ತಿಕ ವಿಚಾರ. ನಾವಂತೂ ಯಾವುದೇ ಪ್ರತಿಭಟನೆ ನಡೆಸುವುದಿಲ್ಲ ಎಂದರು.