ಸಮಾಜ ಸೇವೆಗೆ 10 ಲಕ್ಷ ರೂ. ವಿನಿಯೋಗಿಸಿದವರಿಗೆ ರಜತ ಕಲಶ

udp-pejavara
Published on

ಉಡುಪಿ: ರಾಮ ದೇವರಿಗೆ ವಿಶೇಷ ಸೇವೆ ಸಮರ್ಪಣೆ ಇರುವುದಿಲ್ಲ. 48 ದಿನ ನಡೆಯುವ ಮಂಡಲೋತ್ಸವದಲ್ಲಿ ಕಲಶ ಸೇವೆ ಸಲ್ಲಿಸಬಹುದು. ಒಂದು ರಜತ ಕಲಶಕ್ಕೆ ಒಂದು ಲಕ್ಷ ರೂ. ನಿಗದಿ ಮಾಡಲಾಗಿದೆ. ಕಲಶಾಭಿಷೇಕದ ನಂತರ ಪ್ರಸಾರ ರೂಪದಲ್ಲಿ ಅದನ್ನು ಸೇವಕರ್ತರಿಗೆ ಮರಳಿಸಲಾಗುವುದು. 1 ವರ್ಷದ ಅವಧಿಯಲ್ಲಿ 10 ಲಕ್ಷ ರೂ. ಮೊತ್ತವನ್ನು ಸಮಾಜ ಸೇವೆಗೆ ವಿಯೋಗಿಸಿದವರು ಕಲಶ ಸೇವೆಗೆ ಪಡೆಯಲು ಅರ್ಹರಾಗಿರುತ್ತಾರೆ. ಸೇವಾಕರ್ತರ ನೋಂದಣಿಗಾಗಿ ವಿಶೇಷ ಆಪ್​ ರೂಪಿಸಲಾಗಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಸದಸ್ಯ ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 202324ನೇ ಹಣಕಾಸು ವರ್ಷದಲ್ಲಿ ಮನೆ ನಿಮಾರ್ಣ, ಆರೋಗ್ಯಕ್ಕೆ ನೆರವು, ಶಿಕ್ಷಣಕ್ಕೆ ನೆರವು, ಗೋ ಸೇವೆಗೆ ಹಣ ವಿನಿಯೋಗಿಸಿದವರು ತಮ್ಮ ಸೇವೆಯ ವಿವರಗಳನ್ನು ಗೆಜೆಟೆಡ್​ ಆಫೀಸರ್​ ಮೂಲಕ ದೃಢಪಡಿಸಿಕೊಂಡು ಅಯೋಧ್ಯೆ ಮಂಡಲೋತ್ಸವ ಡಾಟ್​ ಕಾಮ್​ ನಲ್ಲಿ ಹೆಸರು ನೋಂದಣಿ ಮಾಡಬೇಕು. ಡಿಸೆಂಬರ್​ 1ರಂದು ಆಪ್​ ಉದ್ಘಾಟನೆಗೊಳ್ಳಲಿದೆ ಎಂದರು.

ರಜತಾ ಕಲಶ ಸೇವೆಗೆ ನೋಂದಣಿ ಮಾಡಿಕೊಂಡವರು 48 ದಿವಸದಲ್ಲಿ ತಮಗೆ ಅನುಕೂಲವಾದ ದಿನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರೊಂದಿಗೆ 48 ದಿನದಲ್ಲಿ ಅಯೋಧ್ಯೆಯಲ್ಲಿ ಭಜನೆ, ಸಾಂಸ್ಕತಿ ಕಾರ್ಯಕಮ, ನೃತ್ಯ, ಪೌರೋಹಿತ್ಯ ಇತ್ಯಾದಿ ಸೇವೆ ಸಲ್ಲಿಸುವವರಿಗೂ ಅವಕಾಶ ಕಲ್ಪಿಸಲಾಗಿದೆ. ಅವರು ಕೂಡ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಸರು ನೋಂದಾಯಿಸಿಕೊಂಡವರಿಗೆ ರಾಮಜನ್ಮಭೂಮಿ ಕ್ಷೇತ್ರ ಟ್ರಸ್ಟ್​ ಧಾರ್ಮಿಕ ಸಮಿತಿಯಿಂದ ಸರ್ಟಿಫಿಕೇಟ್​ ನೀಡಲಾಗುವುದು. ಇದರ ಆಧಾರದಲ್ಲಿ ಪಾಸುಗಳನ್ನು ವಿತರಿಸಲಾಗುವುದು ಎಂದರು. ಮಾಜಿ ಶಾಸಕ ರಘುಪತಿ ಭಟ್​, ಪೇಜಾವರ ಮಠ ಸಿಇಓ ಸುಬ್ರಹ್ಮಣ್ಯ ಭಟ್​, ಇಂಜಿನಿಯರ್​ ನಂದಕಿಶೂರ ಮತ್ತು ಶ್ರೀನಿಧಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net