ದೇವಾಲಯಗಳು ಸರ್ಕಾರದ ಹಿಡಿತದಿಂದ ಮುಕ್ತವಾಗಲಿ -ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Pejavara-Sri--620x341
Published on



ಮಂಗಳೂರು : ದೇವಾಲಯಗಳು ಸರ್ಕಾರದ ಹಿಡಿತದಿಂದ ಮುಕ್ತವಾಗಿ ಸ್ವಾಯತ್ತಗೊಳ್ಳಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ದೇವಸ್ಥಾನಗಳಿಗೆ ಸ್ವಾಯತ್ತೆ ನೀಡಲು ಸುಪ್ರೀಂ ಕೋರ್ಟ್ ತಿಳಿಸಿದೆ. ಸ್ವಾಯತ್ತೆ ದೊರೆತರೆ ಮಾತ್ರ ದೇವಾಲಯಗಳಿಗೆ ಭಕ್ತರು ನೀಡುವ ಸಂಪತ್ತು ನೇರವಾಗಿ ಭಕ್ತರಿಗೆ ವಿನಿಯೋಗಲು ಸಾಧ್ಯ. ಆಗ ದೇವಸ್ಥಾನಗಳಿಂದ ಶಿಕ್ಷಣ, ವೈದಿಕ ಸಂಸ್ಥೆಗಳನ್ನು ಸ್ಥಾಪಿಸಬಹುದು. ದೇವಾಲಯಗಳು ಇನ್ನಷ್ಟು ಸಮಾಜಮುಖಿಯಾಗಲು ಸಾಧ್ಯವಿದೆ ಎಂದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಮುಂದುವರಿದ ಕಾಮಗಾರಿ ನಡೆಯುತ್ತಿದೆ. ಗರ್ಭಗುಡಿಯಲ್ಲಿ ಸೋರಿಕೆ
ಆಗಿಲ್ಲ. ಕಾಮಗಾರಿ ಪೂರ್ತಿಯಾಗದ ಕಾರಣ ಸ್ವಲ್ಪ ನೀರು ಬಂದಿದೆ ಅಷ್ಟೆ. ಕಾಮಗಾರಿ ಪೂರ್ಣಗೊಂಡ ಬಳಿಕ ಟ್ರಸ್ಟ್‌ನ ನಿಯಮಕ್ಕೆ ತಿದ್ದುಪಡಿ ಮಾಡಿ ಶಿಕ್ಷಣ ಸಂಸ್ಥೆ, ಸಮಾಜಸೇವೆ ಯೋಜನೆಗಳ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಪುರಿಯ ಶ್ರೀ ಜಗನ್ನಾಥ ಮಂದಿರದ ರತ್ನಭಂಡಾರ ತೆರೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ ಭಕ್ತರು ನೀಡುವ ಸಂಪತ್ತಿನ ಮಾಹಿತಿ
ತಿಳಿಯುವುದರಲ್ಲಿ ತಪ್ಪೇನಿಲ್ಲ. ದೇವಸ್ಥಾನಗಳಿಗೆ ಚಿನ್ನಾಭರಣವನ್ನು ಕಾಣಿಕೆ ರೂಪದಲ್ಲಿ ಹಾಕುವುದರಿಂದ ಏನು ಪ್ರಯೋಜನವಿಲ್ಲ. ಅದರ ಬದಲು ಅದನ್ನು ಸಮಾಜಸೇವೆಗೆ ಬಳಸಲು ಯೋಚಿಸಬೇಕು ಎಂದರು.
ಅಯೋಧ್ಯೆಯಲ್ಲಿ ಪೇಜಾವರ ಮಠದ ಯಾತ್ರಿ ನಿವಾಸ ನಿರ್ಮಿಸಲು ಉದ್ದೇಶಿಸಲಾಗಿದೆ. ಅಲ್ಲಿ ಜಾಗ ಖರೀದಿಸಲಾಗಿದೆ. ಯಾತ್ರಿ ನಿವಾಸ ನಿರ್ಮಾಣದಿಂದ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಪೇಜಾವರಶ್ರೀ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net