ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂತರ ಆಗ್ರಹ

UDP-20-SANTA 5
Published on

ಉಡುಪಿ: ಸನಾತನ ಧರ್ಮ ಸಂಸ್ಕೃತಿ ಸದ್ವಿಚಾರಗಳಿಗೆ ಸದಾ ಮನ್ನಣೆ ನೀಡಬೇಕು. ರಾಜ್ಯದಲ್ಲಿಯೂ ಸಮಾನ ನಾಗರಿಕ ಸಂಹಿತೆ ಜಾರಿಗೆ ಕ್ರಮ ವಹಿಸಬೇಕು. ದೇವಸ್ಥಾನಗಳ ಭೂಮಿ ಅತಿಕ್ರಮಣ ತಡೆಗಟ್ಟಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಕರಾವಳಿಯ ವಿವಿಧ ಮಠಾಧೀಶರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ಪ್ರಕಾಶ್ ನಡ್ಡಾ ಅವರಿಗೆ ಕೋರಿಕೆ ಸಲ್ಲಿಸಿದ್ದಾರೆ.

ಸೋಮವಾರ ಪೇಜಾವರ ಮಠದ ರಾಮವಿಠಲ ಸಭಾಂಗಣದಲ್ಲಿ ನಡೆದ ಸಂತರ ಸಭೆಯಲ್ಲಿ ರಾಜ್ಯದ ಆಡಳಿತ ನಡೆಸುವ ಸರ್ಕಾರಗಳಿಂದ ಕರಾವಳಿಯ ಸಾಧು ಸಂತರಿಗೆ ಇರುವ ಅಪೇಕ್ಷೆಗಳ ಪಟ್ಟಿಯನ್ನು ಮಂಡಿಸಲಾಯಿತು.

ದೇಶ ದ್ರೋಹಿ ಮತ್ತು ಉಗ್ರವಾದಿ ಚಟುವಟಿಕೆಗಳನ್ನು ಮಟ್ಟಹಾಕಲು ಕರಾವಳಿ ಮಲೆನಾಡು ಜಿಲ್ಲೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರೀಯ ತನಿಖಾ ದಳದ ವಿಭಾಗವನ್ನು ಶೀಘ್ರ ಆರಂಭಿಸಬೇಕು. ಗೋ ಹತ್ಯಾ ನಿಷೇಧ ಕಾನೂನು ಸಮರ್ಪಕ ಜಾರಿಯ ಜೊತೆಗೆ ಗೋಸಂರಕ್ಷಣೆಗೆ ಪೂರಕ ಯೋಜನೆಗಳಿಗೆ ನೆರವು ನೀಡುವುದು, ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಆದ್ಯತೆ ನೀಡುವುದು, ಕರಾವಳಿಯ ಸಮೃದ್ಧ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಧಾರ್ಮಿಕ ಸಂಪನ್ಮೂಲಗಳಿಗೆ ಹಾನಿಯಾಗದಂತೆ ಔದ್ಯಮಿಕ ಔದ್ಯೋಗಿಕ ಪ್ರಗತಿಗೆ ಯೋಜನೆಗಳನ್ನು ಅನುಷ್ಠಾನಿಸುವುದು , ತುಳು ಭಾಷೆಗೆ ಸೂಕ್ತ ಮಾನ್ಯತೆ, ಭ್ರಷ್ಟಾಚಾರ ಮುಕ್ತ , ಸ್ವಚ್ಛ , ಪಾರದರ್ಶಕ ಆಡಳಿತಕ್ಕೆ ಆದ್ಯತೆ ಸೇರಿದಂತೆ ಹತ್ತು ಅಂಶಗಳ ಪತ್ರವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನಡ್ಡಾರವರಿಗೆ ಹಸ್ತಾಂತರಿಸಿದರು. ಶಾಲು, ಗೋಪಾಲಕೃಷ್ಣನ ಕಂಚಿನ ವಿಗ್ರಹ, ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷರು, ಉಡುಪಿ ಭೇಟಿ ಹಾಗೂ ಸಂತರೊಂದಿಗೆ ಸಮಾಲೋಚನೆ ನಡೆಸಿರುವುದು ಧನ್ಯತೆ ಉಂಟು ಮಾಡಿದೆ. ಬಿಜೆಪಿ ಯಾವತ್ತೂ ಸಂತರ ಅಪೇಕ್ಷೆ ಮತ್ತು ಆಶೀರ್ವಾದ ಮಾರ್ಗದರ್ಶನಗಳೊಂದಿಗೆ ಮುನ್ನಡೆಯುತ್ತದೆ ಎಂದರು.
ಸಭೆಯಲ್ಲಿ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ, ಕುಕ್ಕೆ ಸುಬ್ರಹ್ಮಣ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ, ಉಡುಪಿ ಬೈಲೂರಿನ ರಾಮಕೃಷ್ಣ ಆಶ್ರಮದ ಶ್ರೀ ವಿನಾಯಕಾನಂದ, ಚಿತ್ರಾಪುರ ಮಠದ ಶ್ರೀ ವಿದ್ಯಾಯೇಂದ್ರ, ಮೂಡಬಿದ್ರೆ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ, ಮಾಣಿಲ ಶ್ರೀ ಮೋಹನದಾಸ, ಆನೆಗುಂದಿ ಸ್ವರಸ್ವತಿ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಗುರುಪುರದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಉಪಸ್ಥಿತರಿದ್ದರು. ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಸ್ತುವಾರಿ ಸಚಿವ ಅಂಗಾರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾ.ಪ್ರ. ಕಾರ್ಯದರ್ಶಿ ಸಿ.ಟಿ ರವಿ, ಇಂಧನ ಸಚಿವ ಸುನೀಲ್ ಕುಮಾರ್, ಶಾಸಕ ರಘಪತಿ ಭಟ್, ಲಾಲಾಜಿ ಮೆಂಡನ್, ಪೇಜಾವರ ಮಠದ ವಿಷ್ಣುಮೂರ್ತಿ ಆಚಾರ್ಯ , ಕೃಷ್ಣ ಭಟ್ ಇಂದು ಶೇಖರ ಹೆಗಡೆ ಮೊದಲಾದವರು ಹಾಜರಿದ್ದರು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net