ಜಾತ್ರೆಯಲ್ಲಿ ಪೀಪಿ ಸದ್ದು ಸೈಲೆಂಟ್!

avimukta
ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಹೊಸಕೋಟೆಯ ಇತಿಹಾಸ ಪ್ರಸಿದ್ಧ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವದಲ್ಲಿ ಈ ಬಾರಿ ಕರ್ಕಶ ಶಬ್ಧ ಮಾಡುತ್ತಾ ಕಿರಿಕಿರಿಯುಂಟು ಮಾಡುತ್ತಿದ್ದ ಪೀಪಿ ನಿರ್ಬಂಧ ಭಕ್ತರ ಮೊಗದಲ್ಲಿ ಸಂತಸ ಮೂಡಿಸಿತ್ತು.
ಪ್ರತಿ ಬಾರಿ ಜಾತ್ರೆಗಳಲ್ಲಿ ಪುಂಡರು ಪೀಪಿ ಊದುತ್ತಾ ಕರ್ಕಶ ಶಬ್ದ ಮಾಡುತ್ತಾ ಮಹಿಳೆಯರಿಗೆ, ಮಕ್ಕಳಿಗೆ ತೀವ್ರ ಮುಜುಗರ ತಂದೊಡ್ಡುತ್ತಿದ್ದರು. ಕಿವಿ ಸಮೀಪಕ್ಕೆ ಬಂದು ಉದ್ದೇಶಪೂರ್ವಕವಾಗಿ ಪೀಪಿ ಊದುತ್ತಾ ಕಿರಿಕಿರಿ ಮಾಡುತ್ತಿದ್ದರು ಇದರಿಂದ ಮಹಿಳೆಯರು ಮುಖ್ಯವಾಗಿ ಸಣ್ಣ ಮಕ್ಕಳನ್ನು ಎತ್ತಿಕೊಂಡು ಜಾತ್ರೆಗೆ ಬರುತ್ತಿದ್ದ ತಾಯಂದಿರಿಗೆ ತೀವ್ರ ಹಿಂಸೆಯಾಗುತ್ತಿತ್ತು. ಎಷ್ಟೋ ಬಾರಿ ಸಣ್ಣ ಮಕ್ಕಳು ಹೆದರಿ ಅಳಲು ಆರಂಭಿಸುತ್ತಿದ್ದವು, ಮಕ್ಕಳನ್ನು ಸಮಾಧಾನಗೊಳಿಸುವಲ್ಲಿ ತಾಯಂದಿರು ಸುಸ್ತು ಹೊಡೆಯುತ್ತಿದ್ದರು ಜಾತ್ರೆಯಲ್ಲಿ ಸಂಭ್ರಮಪಡಲು ಬಂದವರು ಹಿಡಿಶಾಪ ಹಾಕುತ್ತಾ ಹಿಂದಿರುತ್ತಿದ್ದ ಸನ್ನಿವೇಶಗಳು ನಿರ್ಮಾಣಗೊಳ್ಳುತ್ತಿದ್ದವು. ಆದರೆ ಈ ಬಾರಿ ಇಂಥ ಕರ್ಕಶ ಶಬ್ಧ ಮಾಡುವ ಪೀಪಿಗಳ ಮಾರಾಟ ಭಾಗಶಃ ಬ್ಯಾನ್ ಆಗಿದ್ದರಿಂದ ಜನರು ಇಂಥ ಕಿರಿಕಿರಿಯಿಂದ ಪಾರಾಗಿದ್ದಾರೆ.
ಜಾಲತಾಣಗಳಲ್ಲಿ ಅಭಿಯಾನ: ಶ್ರೀ ಅವಿಮುಕ್ತೇಶ್ವರ ಬ್ರಹ್ಮರಥೋತ್ಸವ ಸಿದ್ದತೆ ಆರಂಭವಾಗುತ್ತಿದ್ದಂತೆ ತಿಂಗಳ ಹಿಂದಿನಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕರ್ಕಶ ಶಬ್ಧ ಮಾಡುವ ಪೀಪಿಗಳನ್ನು ನಿರ್ಬಂಧಿಸುವಂತೆ ಅನೇಕರು ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದರು. ದಿನಕ್ರಮೇಣ ವಿವಿಧ ವಾಟ್ಸಾಪ್ ಗ್ರೂಪ್‌ಗಳಲ್ಲಿ, ೇಸ್‌ಬುಕ್‌ಗಳಲ್ಲಿ ಈ ಬಗ್ಗೆ ಹೆಚ್ಚೆಚ್ಚು ಜನರು ಕಾಮೆಂಟ್ ಮೂಲಕ ಧ್ವನಿಗೂಡಿಸಿದ್ದರು. ಜಾಲತಾಣಗಳ ಮೂಲಕವೇ ಸಾರ್ವಜನಿಕರು ಪೊಲೀಸರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಈ ಬಗ್ಗೆ ಮನನ ಮಾಡಿಕೊಡುವ ಪ್ರಯತ್ನ ಮಾಡಿದ್ದರು. ಒಂದು ರೀತಿಯಲ್ಲಿ ಕರ್ಕಶ ಶಬ್ದ ಮಾಡುವ ಪೀಪಿಗಳನ್ನು ನಿರ್ಬಂಧಿಸುವ ಸಂಬಂಧ ದೊಡ್ಡಮಟ್ಟದ ಅಭಿಯಾನದಂತೆಯೇ ಜಾಲತಾಣಗಳಲ್ಲಿ ಈ ವಿಷಯ ಸದ್ದು ಮಾಡಿತ್ತು. ಕ್ರಮೇಣ ಜನರಲ್ಲೂ ಈ ಬಗ್ಗೆ ಅರಿವು ಮೂಡಿತ್ತು. ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳ ಸ್ವಯಂ ಇಚ್ಛಾಶಕ್ತಿ ಲವಾಗಿ ಪೀಪಿಗಳ ಕಿರಿಕಿರಿ ತಪ್ಪಿದೆ ಎನ್ನಲಾಗಿದೆ.
ಹಳೇ ವಿಡಿಯೋ ವೈರಲ್: ಕಳೆದ ವರ್ಷ ಕೋಲಾರ ಜಿಲ್ಲೆ ಮುಳಬಾಗಿಲಿನ ಜಾತ್ರೆಯೊಂದರಲ್ಲಿ ಕರ್ಕಶ ಶಬ್ಧ ಮಾಡುವ ಪೀಪಿ ಊದುತ್ತಾ ಜನರಿಗೆ ಕಿರಿಕಿರಿ ಮಾಡುತ್ತಿದ್ದ ಹುಡುಗರಿಂದ ಪೀಪಿ ಕಸಿದ ಪೊಲೀಸರು ಅವರ ಕಿವಿಗಳಿಗೆ ಪೀಪಿ ಇಟ್ಟು ಜೋರಾಗಿ ಊದುವ ಮೂಲಕ ಶಿಕ್ಷೆ ನೀಡುವ ದೃಶ್ಯದ ವಿಡಿಯೋ ತುಣುಕೊಂದು ಇತ್ತೀಚಿಗೆ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದು ಸಹ ಈ ಬಾರಿ ಜಾತ್ರೆಯಲ್ಲಿ ಪೀಪಿಗಳ ಆರ್ಭಟಕ್ಕೆ ಬ್ರೇಕ್ ಹಾಕಿದೆ ಎಂಬ ಚರ್ಚೆ ನಡೆಯುತ್ತಿದೆ.

ಸಣ್ಣ ಮಕ್ಕಳು ಊದುವಂತ ಸಣ್ಣ ಸಣ್ಣ ಪೀಪಿಗಳು ಹೊರತುಪಡಿಸಿ ಕರ್ಕಶ ಶಬ್ಧ ಮಾಡುವ ದೊಡ್ಡ ಪೀಪಿಗಳ ಮಾರಾಟ ಈ ಬಾರಿ ಕಂಡುಬರಲಿಲ್ಲ. ಜತೆಗೆ ಪೊಲೀಸರು, ಸ್ಥಳೀಯ ಮುಖಂಡರು, ನಗರಸಭೆ ಅಧಿಕಾರಿಗಳ ಕಣ್ಗಾವಲಿನಿಂದ ಇಂಥ ಕಿರಿಕಿರಿಗಳಿಗೆ ಆಸ್ಪದವಿಲ್ಲದೆ ಶ್ರೀ ಅವಿಮುಕ್ತೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಬಹಳ ವಿಜೃಂಭಣೆಯಿಂದ ನಡೆದಿದೆ. ಇಂಥ ವಿಷಯಗಳ ಬಗ್ಗೆ ಸಾರ್ವಜನಿಕರೇ ಸ್ವಯಂ ಜಾಗೃತಿ ಮೂಡಿಸಿಕೊಳ್ಳಬೇಕಿದೆ.

ರಘುನಂದನ್, ಹೊಸಕೋಟೆ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net