45 ಪಿಡಿಯಾಟ್ರಿಕ್ ವೆಂಟಿಲೇಟರ್ ಖರೀದಿ, ಮೂರನೇ ಅಲೆ ಎದುರಿಸಲು ಉಡುಪಿ ಜಿಲ್ಲಾಡಳಿತ ಸಜ್ಜು

ventilator
Published on

ಉಡುಪಿ: ಕರೊನಾ ಎರಡನೇ ಅಲೆ ಅಬ್ಬರ ಕಡಿಮೆಯಾಗಿದ್ದು, ಶೀಘ್ರದಲ್ಲೆ ಮೂರನೇ ಅಲೆ ಅಪ್ಪಳಿಸುವ, ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಮುಂಜಾಗ್ರತೆಯಿಂದ ಆಧುನಿಕ ವೈದ್ಯಕೀಯ ಸಲಕರಣೆಗಳನ್ನು ಖರೀದಿ ಮಾಡಲು ಮುಂದಾಗಿದೆ.

ಜಿಲ್ಲೆಯಲ್ಲಿ ಈಗಾಗಲೆ ಸಾಕಷ್ಟು ಐಸಿಯು ಬೆಡ್‌ಗಳಿವೆ. ಹಿರಿಯರಿಗೆ. ವಯಸ್ಕರಿಗೆ ಬೇಕಾದ ಎಲ್ಲ ವೈದ್ಯಕೀಯ ಸಲಕರಣೆಗಳನ್ನು ಜಿಲ್ಲೆಯಲ್ಲಿ ಖರೀದಿಸಲಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಖಾಸಗಿ ಆಸ್ಪತ್ರೆಗಳು ಇರುವುದರಿಂದ ಒಂದನೇ ಮತ್ತು ಎರಡನೇ ಅಲೆಯಲ್ಲಿ ಚಿಕಿತ್ಸೆಗೆ ಸಮಸ್ಯೆಯಾಗಿಲ್ಲ. ಮೂರನೇ ಅಲೆ ಸಂದರ್ಭ ಜಿಲ್ಲೆಗೆ ಕೆಲವು ಸವಾಲುಗಳು ಎದುರಾಗಿದೆ. ಪ್ರಸ್ತುತ ಖರೀದಿಸಿರುವ ವೆಂಟಿಲೇಟರ್‌ಗಳನ್ನು ಮಕ್ಕಳಿಗೆ ಬಳಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಕ್ಷಣ 25 ಪಿಡಿಯಾಟ್ರಿಕ್ ಐಸಿಯು ಖರೀದಿಸಲು ಪ್ರಕ್ರಿಯೆ ನಡೆಯುತ್ತಿದೆ. ಕುಂದಾಪುರ ಮತ್ತು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಮುಂದಿನ ಒಂದೂವರೆ ತಿಂಗಳಿನಲ್ಲಿ ಇಪ್ಪತ್ತು ವೆಂಟಿಲೇಟರ್ ಆಗಮಿಸಲಿದೆ. ಮೊದಲ ಹಂತದಲ್ಲಿ ಜಿಲ್ಲೆಗೆ 45 ಪಿಡಿಯಾಟ್ರಿಕ್ ವೆಂಟಿಲೇಟರ್ ಖರೀದಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳ ವೈದ್ಯರ ನೇಮಕಕ್ಕೆ ಪ್ರಸ್ತಾವನೆ

ಬೇರೆ ಜಿಲ್ಲೆಗೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಕ್ಕಳ ವೈದ್ಯರ ಕೊರತೆ ಇಲ್ಲ. ಹೆಚ್ಚುವರಿ 4 ಮಂದಿ ಮಕ್ಕಳ ವೈದ್ಯರನ್ನು ನೇಮಿಸುವಂತೆ ಜಿಲ್ಲಾಡಳಿತ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಜಿಲ್ಲೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 4 ವೈದ್ಯರು, ಜಿಲ್ಲಾಸ್ಪತ್ರೆ, ಕಾರ್ಕಳ, ಕುಂದಾಪುರ, ಕೋಟ ಸರ್ಕಾರಿ ಆಸ್ಪತ್ರೆಯಲ್ಲಿ ತಲಾ ಒಬ್ಬರಂತೆ 8 ಮಂದಿ ಮಕ್ಕಳ ತಜ್ಞರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಕಳದಲ್ಲಿ 6, ಕುಂದಾಪುರ 8, ಉಡುಪಿ 36 ಮಂದಿ ಸೇರಿದಂತೆ ಒಟ್ಟು 50 ಮಂದಿ ಮಕ್ಕಳ ವೈದ್ಯರಿದ್ದಾರೆ. ಜಿಲ್ಲೆಯ ಸರ್ಕಾರಿ, ಖಾಸಗಿ ವೈದ್ಯರಿಗೆ ಸಿಬ್ಬಂದಿಗೆ ಕೆಎಂಸಿಯಲ್ಲಿ ವಿಶೇಷ ತಾಂತ್ರಿಕ ತರಬೇತಿಗೆ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿದ್ದಾರೆ 2.71 ಲಕ್ಷ ಮಕ್ಕಳು

ಕೋವಿಡ್ ಒಂದು ಮತ್ತು ಎರಡನೇ ಅಲೆಯಲ್ಲಿ 1500ಕ್ಕೂ ಅಧಿಕ ಮಕ್ಕಳಿಗೆ ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ ಒಟ್ಟು 2.71ಲಕ್ಷ ಮಕ್ಕಳಿದ್ದು, ಮಕ್ಕಳನ್ನು ಕೋವಿಡ್ 3ನೇ ಅಲೆಯಿಂದ ರಕ್ಷಿಸುವ ಕುರಿತಂತೆ ಈಗಾಗಲೇ ಭಾರತೀಯ ಮಕ್ಕಳ ವೈದ್ಯರ ಸಂಘ ಸಿದ್ಧಪಡಿಸಿರುವ ಮಾರ್ಗಸೂಚಿ ಅನುಷ್ಠಾನ ಮಾಡಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಕೋವಿಡ್ 3ನೇ ಅಲೆಯ ಬಗ್ಗೆ ವೈದ್ಯಕೀಯ ತಜ್ಞರ ಅಭಿಪ್ರಾಯ ಪರಿಗಣಿಸಿ, ಮಕ್ಕಳ ಆರೋಗ್ಯ ಸುರಕ್ಷತೆಗಾಗಿ ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುತ್ತಿದೆ.

-ಜಿ.ಜಗದೀಶ್. ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net