ಮೂವರು ಪೆಡ್ಲರ್‌ಗಳಿಗೆ ನ್ಯಾಯಾಂಗ ಬಂಧನ

Reva Party Ride news ph-- 1D
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ದೇವನಹಳ್ಳಿ ತಾಲೂಕು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿರುವ ಕನ್ನಮಂಗಲದ ಫಾರ್ಮ್ ಹೌಸ್‌ನಲ್ಲಿ ಭಾನುವಾರ ಆಯೋಜನೆಗೊಂಡಿದ್ದ ರೇವ್‌ಪಾರ್ಟಿ ಮೇಲೆ ದೇವನಹಳ್ಳಿ ನಗರ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದ 31 ಮಂದಿ ಪೈಕಿ ಮೂವರು ಪೆಡ್ಲರ್‌ಗಳು ಎಂಬುದು ತನಿಖೆಯಲ್ಲಿ ಪತ್ತೆಯಾಗಿದ್ದು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಳಿದ 29 ಮಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ, ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹೊರ ರಾಜ್ಯದ ಪೆಡ್ಲರ್‌ಗಳು: ರಾಹುಲ್, ಷರೀಪ್ ಹಾಗೂ ಡ್ಯಾನಿಯಲ್ ಬಂಧಿತರು. ಪ್ರಸ್ತುತ ಬಂಧಿಸಿರುವ ಮೂವರು ಪೆಡ್ಲರ್‌ಗಳ ಪಾಲಕರು ಮೂಲತಃ ಹೊರ ರಾಜ್ಯದವರಾಗಿದ್ದಾರೆ, ಪಾಲಕರು ಹೊರರಾಜ್ಯದಿಂದ ವಲಸೆ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ಆರೋಪಿತ ಪೆಡ್ಲರ್‌ಗಳು ಸ್ಥಳೀಯರೇ ಆಗಿದ್ದು, ಮಾದಕವಸ್ತು ಸರಬರಾಜು ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಇದರಲ್ಲಿ ರಾಹುಲ್ ವಿರುದ್ಧ ಈಗಾಗಲೇ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಜೈಲು ಕಂಡಿದ್ದಾನೆ ಎನ್ನಲಾಗಿದೆ. ಈ ಪೆಡ್ಲರ್‌ಗಳಿಗೆ ಲೀಡರ್ ಯಾರೆಂಬುದನ್ನು ಪತ್ತೆಹಚ್ಚಲು ಪೊಲೀಸರ ವಿಶೇಷ ತಂಡ ಕಾರ್ಯೋನ್ಮುಖವಾಗಿದೆ. ಹೆಚ್ಚಿನ ತನಿಖೆ ಬಳಿಕ ಮಾದಕ ವಸ್ತು ದಂಧೆಯಲ್ಲಿನ ಜಾಲ ಪತ್ತೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಸಿಪಿ ನೇತೃತ್ವದಲ್ಲಿ ದಾಳಿ: ಕನ್ನಮಂಗಲ ಖಾಸಗಿ ಶಾಲೆ ಪಕ್ಕದಲ್ಲಿನ ಬೆಂಗಳೂರು ಮೂಲದ ಅಸಾದ್ ಎಂಬುವವರ ಮಾಲೀಕತ್ವದ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಎಸಿಪಿ ನವೀನ್‌ಕುಮಾರ್, ಇನ್‌ಸ್ಪೆಕ್ಟರ್ ರಾಕೇಶ್ ಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್‌ಐ ಶಿವಕುಮಾರ್ ನೇತೃತ್ವದ ತಂಡ ದಿಢೀರ್ ದಾಳಿ ನಡೆಸಿತ್ತು. ಬೆಂಗಳೂರು ಸೇರಿ ಇತರ ಭಾಗಗಳಿಂದ ಕಾರು ಮತ್ತು ದ್ವಿಚಕ್ರವಾಹನಗಳಲ್ಲಿ ಬಂದಿದ್ದವರನ್ನು ವಶಕ್ಕೆ ಪಡೆದು ದೇವನಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕಿಯ ತಪಾಸಣೆ ಒಳಪಡಿಸಲಾಗಿದೆ. ದೇವನಹಳ್ಳಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬತ್‌ಡೇ ನೆಪದಲ್ಲಿ ಪಾರ್ಟಿ: ಬೆಂಗಳೂರಿನ ಐಟಿ ಉದ್ಯೋಗಿಗಳು ಹಾಗೂ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು ಬರ್ತ್‌ಡೇ ಹೆಸರಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಪೊಲೀಸರ ದಾಳಿವೇಳೆ ನಿಷೇಧಿತ ಗಾಂಜಾ, ಹೈಡ್ರೋ ಗಾಂಜಾ, ಕೊಕೇನ್, ಚರಸ್ ಮತ್ತಿತರ ಮಾದಕ ವಸ್ತುಗಳು ಸಿಕ್ಕಿದ್ದು ಪೊಲೀಸರು ಜಪ್ತಿ ಮಾಡಿದ್ದಾರೆ.

ವಾರಾಂತ್ಯಗಳಲ್ಲಿ ಮಾಮೂಲಿ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಇಂಥ ಪ್ರಕರಣಗಳು ಸಾಮಾನ್ಯವಾಗಿವೆ, ವಾರಾಂತ್ಯಗಳಲ್ಲಿ ಪಾರ್ಟಿ ನೆಪದಲ್ಲಿ ಮಾದಕವಸ್ತುಗಳ ದಂಧೆ ನಡೆಯುತ್ತಿದೆ, ಅದರಲ್ಲೂ ದೇವನಹಳ್ಳಿ ಭಾಗದಲ್ಲಿ ಇಂಥ ಪ್ರಕರಣಗಳು ಹೆಚ್ಚಿವೆ, ನಂದಿಬೆಟ್ಟ ಮಾರ್ಗದಲ್ಲಿ ವಾರಾಂತ್ಯಗಳಲ್ಲಿ ಟ್ರಾಫಿಕ್‌ಜಾಮ್ ಆಗುವಷ್ಟು ಬೆಂಗಳೂರು ಸೇರಿ ಇನ್ನಿತರ ಕಡೆಗಳಿಂದ ನೂರಾರು ವಾಹನಗಳು ಸಂಚರಿಸುವುದು ಗಮನಿಸಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದೇವನಹಳ್ಳಿಯ ಖಾಸಗಿ ಾರ್ಮ್‌ಹೌಸ್‌ನಲ್ಲಿ ರೇವ್‌ಪಾರ್ಟಿ ಸಂಬಂಧ ನಿಷೇಧಿತ ಮಾದಕವಸ್ತುಗಳ ಮಾರಾಟ ಹಾಗೂ ಸೇವನೆ ಪ್ರಕರಣ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಖಾಸಗಿ ರೆಸಾರ್ಟ್ ಸೇರಿ ಇನ್ನಿತರ ಕಡೆಗಳಲ್ಲಿ ತೀವ್ರ ತಪಾಸಣೆ ನಡೆಸುವ ಸಂಬಂಧ ದೇವನಹಳ್ಳಿ ಡಿಸಿಪಿ ಹಾಗೂ ಗ್ರಾಮಾಂತರ ಜಿಲ್ಲೆಯ ಎಸ್‌ಪಿ ಜತೆ ಮಾತುಕತೆ ನಡೆಸಿ ಕಾರ್ಯಾಚರಣೆ ರೂಪಿಸಲಾಗುವುದು.

ಎ.ಬಿ.ಬಸವರಾಜು, ಜಿಲ್ಲಾಧಿಕಾರಿ

ಕನ್ನಮಂಗಲದ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿ ಪ್ರಕರಣ ಸಂಬಂಧ ವಶಕ್ಕೆ ಪಡೆದ 31 ಮಂದಿ ಪೈಕಿ ಮೂವರು ಪೆಡ್ಲರ್‌ಗಳನ್ನು ಪತ್ತೆಹಚ್ಚಿದ್ದು ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ, ಹೊರ ರಾಜ್ಯದವರಾದರೂ ಬೆಂಗಳೂರಿನಲ್ಲೇ ಬಹಳ ವರ್ಷದಿಂದ ವಾಸವಿರುವ ಮಾಹಿತಿ ಇದೆ. ಪೆಡ್ಲರ್‌ಗಳ ಹಿಂದಿರುವ ಕಿಂಗ್‌ಪಿನ್ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ.

ನವೀನ್‌ಕುಮಾರ್ ಎಸಿಪಿ ದೇವನಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net