ಭೂಮಿ ಹುಣ್ಣಿಮೆಗೆ ಸಜ್ಜಾದ ರೈತ ಸಮೂಹ

paddy
ಭೂಮಿ ಹುಣ್ಣಿಮೆ ಸಂದರ್ಭದಲ್ಲಿ ಹಸಿರು ಹೊದ್ದ ಭೂರಮೆ.
Published on

ಶಿವಮೊಗ್ಗ: ಸಂಭ್ರಮ, ಸಡಗರದ ಭೂಮಿ ಹುಣ್ಣಿಮೆಗೆ ಜಿಲ್ಲೆಯ ಕೃಷಿಕ ಸಮುದಾಯ ಸಜ್ಜಾಗಿದೆ. ಈ ವರ್ಷ ಅತಿವೃಷ್ಟಿಯಿಂದ ನಷ್ಟ ಅನುಭವಿಸಿದರೂ ಜೀವಧಾತೆ ಭೂ ತಾಯಿಯ ಆರಾಧನೆಗೆ ರೈತರು ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಗಾರು ಬೆಳೆಗಳು ಹಾಲು ತುಂಬುವ ಭೂಮಿ ಹುಣ್ಣಿಮೆ ಸಮಯದಲ್ಲಿ ತುಂಬು ಗರ್ಭಿಣಿಯಂತೆ ಕಂಗೊಳಿಸುವ ಭೂಮಿ ತಾಯಿಗೆ ಮಡಿಲು ತುಂಬುವುದು ಈ ಹಬ್ಬದ ವಿಶೇಷ.

ವಿಶೇಷ ಅಡುಗೆ ಮಾಡಿ ಗರ್ಭಿಣಿಯ ಬಯಕೆ ತೀರಿಸಲಾಗುತ್ತದೆ. ಅದೇ ರೀತಿ ಭೂಮಿ ತಾಯಿ ಫಲ ಹೊತ್ತ ಸಮಯದಲ್ಲಿ ಗರ್ಭಿಣಿ ಎಂದು ಭಾವಿಸಿದ್ದ ಪೂರ್ವಿಕರು ಭೂಮಿ ಹುಣ್ಣಿಮೆ ಆಚರಣೆಗೆ ವಿಶೇಷ ಮಹತ್ವ ನೀಡಿದ್ದರು. ಈ ಪರಂಪರೆ ಅನೇಕ ತಲೆಮಾರುಗಳಿಂದ ಮುಂದುವರಿದಿದೆ.
ಭತ್ತದ ಗದ್ದೆ ಹೊಂದಿರುವವರು ಸಸಿಯನ್ನು ಮುತ್ತೈದೆಯಂತೆ ಸಿಂಗರಿಸಿ ನೈವೇದ್ಯ ನೀಡಿದರೆ, ಕೆಲವರು ಅಡಕೆ ಮರಗಳಿಗೆ ಹಸಿರು ಸೀರೆ ಉಡಿಸಿ, ಆಭರಣಗಳಿಂದ ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಇದರೊಂದಿಗೆ ಐದು ಅಡಿಕೆ ಮರ, ತೆಂಗಿನಮರಗಳಿಗೆ ಜೇಡಿ ಮಣ್ಣು ಹಾಗೂ ಕೆಮ್ಮಣ್ಣಿನಿಂದ ಪಟ್ಟೆ ಬಳಿಯುತ್ತಾರೆ.
ಹಸೆ ಚಿತ್ತಾರದಿಂದ ಅಲಂಕೃತಗೊಂಡ ಎರಡು ಬುಟ್ಟಿಯಲ್ಲಿ ಮುಂಜಾನೆ ಚರಗವನ್ನು ಭೂಮಿಗೆ ಹಾಕಿ ಬರುವ ರೈತರು ನಂತರ ಅದೇ ಬುಟ್ಟಿಯಲ್ಲಿ ವಿವಿಧ ಬಗೆಯ ಅಡುಗೆ ಪದಾರ್ಥಗಳನ್ನು ತಮ್ಮ ಹೊಲ, ತೋಟಕ್ಕೆ ಒಯ್ದು, ಭೂಮಿಗೆ ನೈವೇದ್ಯ ಮಾಡುತ್ತಾರೆ. ನಂತರ ಅಲ್ಲಿಯೇ ಊಟ ಮಾಡುತ್ತಾರೆ.
ಹಬ್ಬದ ಸಿದ್ಧತೆ: ಭೂಮಿ ಹುಣ್ಣಿಮೆ ಬಂತೆಂದರೆ ಹಳ್ಳಿಗಳಲ್ಲಿ ಅದೇನೋ ಒಂದು ರೀತಿಯ ಸಂಭ್ರಮ. ಈ ಹಬ್ಬವನ್ನು ವಿಶೇಷವಾಗಿ ಆಚರಿಸಲು ಎರಡು ದಿನಗಳಿಂದಲೇ ಸಿದ್ಧತೆ ಆರಂಭಿಸಲಾಗುತ್ತದೆ. ಹಬ್ಬದ ಹಿಂದಿನ ದಿನ ರಾತ್ರಿ ಪೂರ್ತಿ ಎಲ್ಲ ರೀತಿಯ ವಿಶೇಷ ಅಡುಗೆಗಳು ಸಿದ್ಧಗೊಂಡಿರುತ್ತವೆ.
ಹಬ್ಬದ ಹಿಂದಿನ ದಿನ ಎಲ್ಲ ಜಾತಿಯ ಸಸ್ಯಗಳ ಎಲೆಗಳನ್ನು, ಕುಂಬಳಕಾಯಿ, ಚೀನಿಕಾಯಿ, ಸವತೆಕಾಯಿ, ಅಮಟೆಕಾಯಿ ಸೇರಿ ತರಕಾರಿಗಳನ್ನು ಬೇಯಿಸಿ ಚರಗ ತಯಾರಿಸಲಾಗುತ್ತದೆ. ಇದನ್ನು ಹಬ್ಬದ ದಿನ ಸೂರ್ಯ ಮೂಡುವುದರೊಳಗೆ ಭೂಮಿಗೆ ಹಾಕಲಾಗುತ್ತದೆ. ಇದರೊಂದಿಗೆ ಹಾಲುಗ್ಗಿ ತಯಾರಿಸಿ ಭೂಮಿಗೆ ನೇವೇದ್ಯ ನೀಡಲಾಗುತ್ತದೆ. ಭೂಮಿಯ ಫಲವತ್ತತೆ ಕುಗ್ಗುತ್ತದೆ ಎಂಬ ಉದ್ದೇಶದಿಂದ ಚರಗ ಹಾಗೂ ಹಾಲುಗ್ಗಿಗೆ ಉಪ್ಪು ಬಳಸದಿರುವುದು ಇನ್ನೊಂದು ವಿಶೇಷ.
ಹಿಂದಿನ ದಿನವೇ ಅಡುಗೆ ತಯಾರಿ:ಜಾಗರಣೆ ಎಂದರೆ ಶಿವರಾತ್ರಿ ನೆನಪಾಗುವುದು ಸಹಜ. ಆದರೆ ಭೂಮಿ ಹುಣ್ಣಿಮೆ ಹಿಂದಿನ ರಾತ್ರಿ ಹಳ್ಳಿಗಳಲ್ಲಿ ವಿವಿಧ ಬಗೆಯ ಅಡುಗೆ ತಯಾರಿಸುವುದಕ್ಕಾಗಿ ರಾತ್ರಿಯಿಡೀ ಎಚ್ಚರವಾಗಿರುತ್ತಾರೆ. ಮುಂಜಾನೆಯೇ ಭೂಮಿಗೆ ಪೂಜೆ ಸಲ್ಲಿಸುವುದರಿಂದ ಹಿಂದಿನ ರಾತ್ರಿ ಪೂರ್ತಿ ವಿವಿಧ ಬಗೆಯ ಅಡುಗೆ ತಯಾರಿಸುವುದರಿಂದ ಜಾಗರಣೆ ಅನಿವಾರ್ಯ. ಹೋಳಿಗೆ, ಕಜ್ಜಾಯ, ಕೊಟ್ಟೆ ಕಡುಬು, ಚೀನಿಕಾಯಿ ಕಡುಬು, ಅಮಟೆಕಾಯಿ ಸಿಹಿ ಪಲ್ಯ ಇವು ಭೂಮಿ ಹುಣ್ಣಿಮೆಯ ವಿಶೇಷ ಅಡುಗೆಗಳು. ಭೂಮಿಯೂ ಒಂದು ಹೆಣ್ಣು. ಎಲ್ಲರನ್ನೂ ಸಲಹುವ ಭೂಮಿ ತಾಯಿಯನ್ನು ತೃಪ್ತಿ ಪಡಿಸುವ ಕಾಯಕ ಭಾರತೀಯ ಸಂಸ್ಕೃತಿಯಲ್ಲಿ ನಿರಂತರವಾಗಿ ನಡೆದುಕೊಂಡು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net