ರೈತನ ಕೈ ಹಿಡಿದ ಅವರೆಕಾಯಿ: ಅನ್ನದಾತನ ಬಾಳಲ್ಲಿ ಸಂಕ್ರಾಂತಿ ತಂದ ಸಂತಸ

15 Klr 02
Published on

ಎನ್.ಮುನಿವೆಂಕಟೇಗೌಡ, ಕೋಲಾರ

ಎರಡು ವರ್ಷಗಳಿಂದ ಕರೊನಾ ಮತ್ತು ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಮಾವು ಸೇರಿದಂತೆ ತರಕಾರಿಗಳಿಗೆ ಬೆಲೆ ಸಿಗದೆ ರೈತರು ಸಂಕಷ್ಟಕ್ಕೀಡಾಗಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ಅವರೆಕಾಯಿಗೆ ಉತ್ತಮ ಬೆಲೆ ಬಂದಿದ್ದು ಈ ಸಂಕ್ರಾಂತಿಯು ರೈತನ ಬಾಳಲ್ಲಿ ಸಂತೋಷ ತಂದಿದೆ.

ಶ್ರೀನಿವಾಸಪುರ ತಾಲೂಕಿನಲ್ಲಿ ಯಥೇಚ್ಚವಾಗಿ ಅವರೆಕಾಯಿ ಬೆಳೆಯಲಾಗುತ್ತಿದ್ದು ಬೇಡಿಕೆಯೂ ಹೆಚ್ಚಿದೆ. ಇಲ್ಲಿ ಬೆಳೆದ ಅವರೆಕಾಯಿಯನ್ನು ಬೆಂಗಳೂರು, ಹೊಸಕೋಟೆ, ಕೆಜಿಎಫ್ ಮತ್ತು ತಮಿಳುನಾಡಿನ ವೇಲೂರು, ಚೆನ್ನೈ, ಆರಣಿ ಮೊದಲಾದ ಕಡೆ ರ್ತು ಮಾಡಲಾಗುತ್ತದೆ.

ತಾಲೂಕಿನ ಮಾವಿಗೆ ಎಷ್ಟು ಬೇಡಿಕೆಯಿದೆಯೋ ಅಷ್ಟೆ ಬೇಡಿಕೆ ಅವರೆಕಾಯಿಗೂ ಇದೆ. ಕಳೆದ ಡಿ. 25ರಿಂದ ಮಾರುಕಟ್ಟೆಗೆ ಬರಲಾರಂಭಿಸಿದೆ. ಆರಂಭದಲ್ಲಿ ಕೆಜಿ 35 ರೂಪಾಯಿಗೆ ಮಾರಾಟವಾಗುತ್ತಿತ್ತು. ಇದೀಗ ಪ್ರತಿ ಕೆಜಿ 55 ರೂಪಾಯಿವರೆಗೆ ಮಾರಾಟವಾಗುತ್ತಿದೆ. ರೈತರಿಂದ ವ್ಯಾಪಾರಿಗಳು ಖರೀದಿಸುವ ದರ ಇದಾದರೆ, ವ್ಯಾಪಾರಸ್ಥರು ಗ್ರಾಹಕರಿಗೆ 60 ರೂಪಾಯಿಯಿಂದ 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ.

ಸಂಕ್ರಾಂತಿಗೆ ಪ್ರತಿ ಮನೆಯಲ್ಲಿ ಅವರೆಕಾಯಿ ಬಳಸುತ್ತಾರೆ. ಎರಡು ದಿನಗಳಿಂದ ಮಾರುಕಟ್ಟೆಯಲ್ಲಿ ಬೆಲೆ ಗಗನಕ್ಕೇರಿದೆ. ಕಳೆದ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಮಳೆ ಹೆಚ್ಚಾದ ಕಾರಣ ಬಿತ್ತನೆ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ರಾಗಿ ಜತೆಯಲ್ಲಿ ಅವರೆ ಬೆಳೆಯುತ್ತಿದ್ದರು. ಮಳೆಯಿಂದಾಗಿ ಇವೆರಡಕ್ಕೂ ಅವಧಿ ಮುಗಿದ ಕಾರಣ ರಾಗಿ ಬಿಟ್ಟು ಕೆಲವರು ಮಾವಿನ ತೋಟ ಹಾಗೂ ಗದ್ದೆಗಳಲ್ಲಿ ಅವರೆ ಬೆಳೆದರು. ರಾಗಿ ಬದಲಾಗಿ ಅವರೆಕಾಯಿ ರೈತನ ಕೈ ಹಿಡಿದಿದೆ.
ತಾಲೂಕಿನಲ್ಲಿ ಹೆಚ್ಚಾಗಿ ಮಾವಿನ ತೋಟಗಳಿರುವುದರಿಂದ ಅವರೆಕಾಯಿಯನ್ನು ಉಪ ಬೆಳೆಯಾಗಿ ಬೆಳೆಯಲಾಗುತ್ತಿದೆ. ಕಳೆದ ವರ್ಷ 25ರಿಂದ 30 ರೂಪಾಯಿ ತನಕ ವ್ಯಾಪಾರಸ್ಥರು ಖರೀದಿಸಿದ್ದರು. ಈ ಬಾರಿ ಬೆಳೆ ಕಡಿಮೆಯಾದ ಕಾರಣ ಇರುವ ಬೆಳೆಯಲ್ಲಿ ಫಸಲು ಹೆಚ್ಚಾಗಿದೆ. ಅದೇ ರೀತಿ ರೈತನಿಗೂ ಉತ್ತಮ ಬೆಲೆ ಬಂದಂತಾಗಿದೆ.

ಕರೊನಾದಿಂದಾಗಿ ಅವರೆಕಾಯಿ ರಫ್ತಿಗೆ ಅವಕಾಶ ಇಲ್ಲದಂತಾಗಿತ್ತು. ಈ ಬಾರಿ ಮಳೆಯಿಂದ ಬಿತ್ತನೆಗೆ ಹಿನ್ನಡೆಯಾಗಿತ್ತು. ಆದರೂ ಕೆಲವರು ತಡವಾಗಿ ಬಿತ್ತನೆ ಮಾಡಿದ ಕಾರಣ ಉತ್ತಮ ಬೆಳೆ, ಸಲಿನ ಜತೆಗೆ ಉತ್ತಮ ಬೆಲೆಯೂ ಸಿಗುತ್ತಿದೆ.
ಚಂದ್ರಶೇಖರ್ ನೀಲಟೂರು, ರೈತ

ಅವರೆಕಾಯಿಯನ್ನು ವ್ಯಾಪಾರಸ್ಥರು ಖರೀದಿಸಿ ಬೆಳೆ ಮಾಡಿ ವಾಣಿಜ್ಯವಾಗಿ ಮಾರಾಟಕ್ಕೆ ಬಳಸುತ್ತಿರುವುದು ಮತ್ತು ಶ್ರೀನಿವಾಸಪುರದ ಅವರೆಕಾಯಿ ರುಚಿಯಾಗಿರುವುದರಿಂದ ಬೆಂಗಳೂರು ಸೇರಿದಂತೆ ಇತರೆಡೆ ಬೇಡಿಕೆ ಹೆಚ್ಚಾಗಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಖರೀದಿದಾರರ ಸಂಖ್ಯೆ ಹೆಚ್ಚಾಗಿದೆ. ಆದ ಕಾರಣ ಈ ಬಾರಿ ಅವರೆಕಾಯಿ ಬೇಡಿಕೆ ಹೆಚ್ಚಾಗಿದೆ.
ಪಿ.ಆರ್.ಸೂರ್ಯನಾರಾಯಣ, ನೀಲಟೂರು, ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net