

ಶಿರಹಟ್ಟಿ: ತಾಲೂಕಿನಾದ್ಯಂತ ಶುಕ್ರವಾರ ರಾತ್ರಿ ಗುಡುಗು, ಸಿಡಿಲು ಮಿಶ್ರಿತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.
ಮಳೆಯಿಂದ ಪಟ್ಟಣದ ಚರಂಡಿಗಳೆಲ್ಲ ತುಂಬಿ ಅಪಾರ ಪ್ರಮಾಣದ ನೀರು ರಸ್ತೆಯಲ್ಲಿ ಹರಿಯಿತು.
ಕಣದಲ್ಲಿ ಬಣವಿಗಳನ್ನು ಹಾಕಿ ಶೇಂಗಾ ಒಕ್ಕಣೆಯಲ್ಲಿ ತೊಡಗಿದ್ದ ರೈತರು ಹೊಟ್ಟಿನ ರಕ್ಷಣೆಗೆ ಪ್ಲಾಸ್ಟಿಕ್ ಹೊದಿಸಲು ಪರದಾಡಿದರು.
ಮುಂಗಾರಿನಲ್ಲಿ ಮಳೆಯಿಂದ ಬೆಳೆ ಹಾಳಾಯಿತು. ಅದರ ನಷ್ಟವನ್ನು ಶೇಂಗಾ ಒಕ್ಕಣೆ ಮಾಡಿ ದಕ್ಕಿಸಿಕೊಳ್ಳೋಣ ಎಂದರೆ ವರುಣಾಘಾತಕ್ಕೆ ಸಿಲುಕಿ ಹೊಟ್ಟು ಸಹ ಕೈಸೇರದ ಸ್ಥಿತಿ ಎದುರಾಗಿದೆ. ಹಿಂಗಾರಿನ ಜೋಳ, ಗೋಧಿ, ಕಡಲೆ ರೋಗಬಾಧೆಗೆ ತುತ್ತಾಗುವ ಆತಂಕವಿದೆ ಎಂದು ಖಾನಾಪುರ ರೈತ ಸಿರಾಜ್ ಟಪಾಲ, ಯಲ್ಲಪ್ಪ ಹೆಗ್ಗಣ್ಣವರ ಅಲವತ್ತುಕೊಂಡರು.