

ಚನ್ನಗಿರಿ: ಅಡಕೆ ಬೆಳೆ ಜತೆಯಲ್ಲಿ ಅಂತರ ಬೆಳೆಯಾಗಿ ಕೋಕೋ ಬೆಳೆ ಬೆಳೆಯುವುದರಿಂದ ಭೂಮಿ ಫಲವತ್ತತೆ ಕಾಪಾಡಿಕೊಳ್ಳುವ ಜತೆ ಹೆಚ್ಚಿನ ಆದಾಯ ನಿರೀಕ್ಷೆ ಮಾಡಬಹುದಾಗಿದೆ ಎಂದು ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿವಿ ಸಂಶೋಧನಾ ನಿರ್ದೇಶಕ ಡಾ.ಬಿ. ಹೇಮ್ಲಾನಾಯ್ಕ ತಿಳಿಸಿದರು.
ಇಲ್ಲಿನ ತುಮ್ಕೋಸ್ ಸಭಾಂಗಣದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ, ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ ಕೊಚ್ಚಿನ್, ಅಡಕೆ ಸಂಶೋಧನಾ ಕೇಂದ್ರ ಮತ್ತು ತುಮ್ಕೋಸ್ ಸಹಯೋಗದಲ್ಲಿ ಅಡಕೆ ಬೆಳೆಯಲ್ಲಿ ಅಂತರ ಬೆಳೆಯಾಗಿ ಕೋಕೋ ಜಿಲ್ಲಾ ಮಟ್ಟದ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಬುಧವಾರ ಮಾತನಾಡಿದರು.
ಶಿವಮೊಗ್ಗ ವಿಸ್ತರಣಾ ನಿರ್ದೇಶಕ ಡಾ.ಕೆ.ಟಿ. ಗುರುಮೂರ್ತಿ ಮಾತನಾಡಿ, ಕೋಕೋ ಇತ್ತೀಚಿನ ವಾಣಿಜ್ಯ ಬೆಳೆಯಾಗಿದೆ. ರೈತರಿಗೆ ಲಾಭ ತಂದು ಕೊಡುತ್ತಿದೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಹೆಚ್ಚು ಬೆಳೆ ಬೆಳೆಯಲಾಗುತ್ತಿದೆ. ಕರ್ನಾಟಕದಲ್ಲಿಯೂ ರೈತರು ಅಂತರ ಬೆಳೆಯಾಗಿ ಬೆಳೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ತುಮ್ಕೋಸ್ ಅಧ್ಯಕ್ಷ ಆರ್.ಎಂ. ರವಿ, ನಿರ್ದೇಶಕರಾದ ಟಿ.ವಿ. ರಾಜು ಪಟೇಲ್, ಗಂಗಾಧರ್, ಜಿ.ಸಿ. ಶಿವಮೂರ್ತಿ, ಜಿ.ಆರ್. ಪ್ರಭು, ಎಚ್.ಬಿ. ಸುರೇಶ್, ಆರ್. ಕೆಂಚಪ್ಪ, ದೇವೇಂದ್ರಪ್ಪ, ಪಾರ್ವತಮ್ಮ, ಜಿ.ಆರ್. ಶಿವಕುಮಾರ್ ಇದ್ದರು.