ರೈತರ ಆದಾಯ ಸುಧಾರಿಸಲು ಶೇಂಗಾ ಬೆಳೆಗೆ ಪ್ರಾಮುಖ್ಯ

IMG20250627211302.jpg
Published on

ಬೆಳಗಾವಿ: ಖಾದ್ಯ ತೈಲಗಳನ್ನು ಆಮದು ಮಾಡಿಕೊಳ್ಳುವಲ್ಲಿ ದೇಶದ ಅವಲಂಬನೆ ಕಡಿಮೆ ಮಾಡಲು ಮತ್ತು ದೇಶೀಯ ಎಣ್ಣೆ ಕಾಳುಗಳ ಉತ್ಪಾದನೆ ಹೆಚ್ಚಿಸುವ ಹಾಗೂ ರೈತರ ಆದಾಯ ಸುಧಾರಿಸುವುದರೊಂದಿಗೆ ಆತ್ಮನಿರ್ಭರತೆಯನ್ನು ಸಾಧಿಸುವ ಉದ್ದೇಶದಿಂದ ಶೇಂಗಾ ಬೆಳೆಗೆ ಪ್ರಾಮುಖ್ಯ ನೀಡಲಾಗಿದೆ ಎಂದು ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕಷಿ ವಿಜ್ಞಾನ ಕೇಂದ್ರದ ಮಖ್ಯಸ್ಥ ಡಾ. ಮಂಜುನಾಥ ಚೌರಡ್ಡಿ ತಿಳಿಸಿದರು.

ಬೈಲಹೊಂಗಲ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕಷಿ ವಿಜ್ಞಾನ ಕೇಂದ್ರದಿಂದ ರಾಮದುರ್ಗ ತಾಲೂಕಿನ ಚಿಕ್ಕೊಪ್ಪ ಗ್ರಾಮದ ಸಿದ್ದಪ್ಪ ಇಂಗಳಗಿ ಅವರ ತೋಟದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶೇಂಗಾ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಶೇಂಗಾ ಬೆಳೆಯ ಪ್ರಾಮುಖ್ಯತೆ ಹೆಚ್ಚಿಸಲು ಕಷಿ ವಿಜ್ಞಾನ ಕೇಂದ್ರದಿಂದ ದತ್ತು ಪಡೆಯಲಾಗಿತ್ತು. ಅದರಂತೆ ಪ್ರಾತ್ಯಕ್ಷಿಕೆಯಲ್ಲಿ ಅಲ್ಪಾವಧಿ ಶೇಂಗಾ ತಳಿಯಾದ (ಟಿಸಿಜಿಎಸ್-1694) ಇದರ ಅವಧಿಯು 105 ರಿಂದ 110 ದಿವಸವಾಗಿದ್ದು, ಇಳುವರಿ 14 ರಿಂದ 15 ಕ್ವಿಂಟಾಲ್ ಬರುತ್ತದೆ. ಎಲೆಚುಕ್ಕೆ, ತುಕ್ಕು ರೋಗ ಹಾಗೂ ಬರ ನಿರೋಧಕತೆ ಹೊಂದಿದೆ. ಎಣ್ಣೆ ಅಂಶ ಶೇ. 50 ಇರುತ್ತದೆ. ಕ್ಷೇತ್ರೋತ್ಸವದಲ್ಲಿ ಎಲ್ಲ ರೈತರು ಈ ತಳಿಯ ಪ್ರಯೋಜನ ಪಡೆದುಕೊಂಡು ಗ್ರಾಮ ವ್ಯಾಪ್ತಿಯಲ್ಲಿ ಶೇಂಗಾ ಬೆಳೆಯ ಕ್ಷೇತ್ರವನ್ನು ಹೆಚ್ಚಿಸಬೇಕೆಂದರು.

ವಿಜ್ಞಾನಿಗಳಾದ ಜಿ.ಬಿ. ವಿಶ್ವನಾಥ, ಎಸ್.ಎಂ. ವಾರದ, ರೈತ ಸಿದ್ದಪ್ಪ ಇಂಗಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net