ಸತತ ಮಳೆಗೆ ಹಾಳಾದ ಶೇಂಗಾ ಬೆಳೆ

Peanut crop damaged by continuous rain
Published on

ನರೇಗಲ್ಲ: ಕಳೆದ ಮೂರು-ನಾಲ್ಕು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಕಟಾವು ಮಾಡಿದ ಶೇಂಗಾ ಜಡಿ ಮಳೆಗೆ ಕೊಳೆಯುತ್ತಿದೆ. ಅಲ್ಪ ಬೆಳೆ ನಿರೀಕ್ಷೆಯಲ್ಲಿದ್ದ ರೈತ ಕಂಗಾಲಾಗಿದ್ದಾನೆ.

ಈ ಬಾರಿ ನೀರಾವರಿ ಜಮೀನಿನಲ್ಲಿ ಸಾಕಷ್ಟು ಸಂಕಷ್ಟಗಳ ಮಧ್ಯದಲ್ಲಿ ಶೇಂಗಾ ಬೆಳೆಯಲಾಗಿತ್ತು. ಬೆಳೆಗೆ ಪ್ರಾರಂಭದಿಂದಲೇ ಅಲ್ಲಲ್ಲಿ ಬೆಂಕಿ ಸೀಡೆ, ಬೂದುರೋಗ ಕಾಣಿಸಿಕೊಂಡಿತ್ತು. ಔಷಧ ಸಿಂಪಡಿಸಿ ರೋಗ ಬಾಧೆ ನಿವಾರಿಸಿಕೊಂಡಿದ್ದು, ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಹಾಕಿದ ಬಂಡವಾಳ ಬಾರದಿದ್ದರೂ ದನಕರುಗಳಿಗೆ ಶೇಂಗಾ ಹೊಟ್ಟು ಸಿಗುತ್ತದೆ ಎಂಬ ಧೈರ್ಯದಲ್ಲಿದ್ದ ರೈತ, ಜಮೀನಿನಲ್ಲಿ ಶೇಂಗಾ ಬೆಳೆ ಕೊಳೆಯುತ್ತಿರುವುದನ್ನು ಕಂಡು ಕಂಬನಿ ಮಿಡಿಯುತ್ತಿದ್ದಾರೆ. ಒಂದೆಡೆ ಬೆಳೆ ಇಲ್ಲದೆ, ಮತ್ತೊಂದೆಡೆ ಜಾನುವಾರುಗಳಿಗೆ ಹೊಟ್ಟು ಕೂಡ ಇಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಸಾಲ ಮಾಡಿ ಕೃಷಿಗೆ ಹಣ ಸುರಿದ ರೈತರು ಫಸಲು ನಷ್ಟದಿಂದ ಪರಿತಪಿಸುವಂತಾಗಿದೆ.

ಎರಡು ದಿನಗಳ ಹಿಂದೆ ಶೇಂಗಾ ಬೆಳೆ ಕಟಾವು ಮಾಡಲಾಗಿತ್ತು. ಇನ್ನೇನೂ ಬೆಳೆ ಒಂದೆಡೆ ಸಂಗ್ರಹಿಸಿ ರಾಶಿ ಮಾಡಬೇಕು ಎನ್ನುವಷ್ಟರಲ್ಲಿಯೇ ಸತತ ಮಳೆಯಿಂದಾಗಿ ಶೇಂಗಾ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಕೈಗೆ ಬಂದ ಬೆಳೆ ಬಾಯಿಗೆ ಬಾರದಂತ ಸ್ಥಿತಿ ರೈತನದ್ದಾಗಿದೆ.

ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಶೇಂಗಾ ಮಳೆಯಿಂದಾಗಿ ಕಣ್ಣಮುಂದೆ ಕಮರಿ ಹೋಗಿದೆ. ಜಾನುವಾರುಗಳಿಗೆ ಹೊಟ್ಟು ಸಿಗುತ್ತದೆ ಎಂದರೆ ಅದು ಇಲ್ಲವಾಗಿದೆ. ಇದರಿಂದಾಗಿ ಸಾಕಷ್ಟು ಆರ್ಥಿಕವಾಗಿ ನಷ್ಟವನ್ನು ಅನುಭವಿಸುವಂತಾಗಿದೆ. ಜಿಲ್ಲಾಡಳಿತ ಬೆಳೆ ಹಾನಿ ಪರಿಹಾರ ನೀಡಿಬೇಕು. | ದುಂಡಪ್ಪ ನಾಶಿಪುಡಿ, ಕೋಡಿಕೊಪ್ಪ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net