

ಶೃಂಗೇರಿ: ಶರನ್ನವರಾತ್ರಿ ನಾಲ್ಕನೇ ದಿನವಾದ ಭಾನುವಾರ ಶ್ರೀ ಶಾರದೆ ಮಯೂರ ವಾಹನಾಲಂಕಾರದಲ್ಲಿ ಕಂಗೊಳಿಸಿದಳು. ಶಕ್ತ್ಯಾಯುಧವನ್ನು ಧರಿಸಿ ನವಿಲನ್ನೇರಿ ಕುಮಾರಸ್ವಾಮಿಯ ಶಕ್ತಿಯಾಗಿ ಭಕ್ತರಿಗೆ ಅಭಯಹಸ್ತ ನೀಡಿದಳು.
ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರು ಬೆಳಗ್ಗೆ ಮಠದ ಶ್ರೀ ತೋರಣಗಣಪತಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಜನಾರ್ದನಸ್ವಾಮಿ, ಶ್ರೀ ಶಂಕರಾಚಾರ್ಯ ದೇವಾಲಯಗಳನ್ನು ದರ್ಶಿಸಿದರು. ಬಳಿಕ ಜಗನ್ಮಾತೆ ಆವಾಸಸ್ಥಾನವೆಂದು ಶಾಸ್ತ್ರದಲ್ಲಿ ತಿಳಿಸಿರುವ ಶ್ರೀಚಕ್ರಕ್ಕೆ ನವಾವರಣ ಪೂಜೆ ಸಲ್ಲಿಸಲಾಯಿತು. ಮಂದಾರ, ಪಾರಿಜಾತ ಪತ್ರೆಗಳು, ಸೇವಂತಿಗೆ, ಮಲ್ಲಿಗೆ ಇತ್ಯಾದಿ ಪುಷ್ಪಗಳಿಂದ ಶೃಂಗರಿಸಿ, ನಾಮಾವಳಿಗಳನ್ನು ಪಠಿಸಿ ದೂಪ-ದೀಪಗಳನ್ನು ಬೆಳಗಿ, ನೈವೇದ್ಯ ಸಮರ್ಪಿಸಿ ಯತಿಗಳು ಶ್ರೀ ಶಾರದೆಗೆ ವಿಶೇಷಪೂಜೆ ಸಲ್ಲಿಸಿದರು.
ಮಠದಲ್ಲಿ ನಾಲ್ಕು ವೇದಗಳ ಪಾರಾಯಣ, ವಾಲ್ಮೀಕಿ ರಾಮಾಯಣ, ಮಾಧವೀಯ ಶಂಕರ ದಿಗ್ವಿಜಯ, ದುರ್ಗಾಸಪ್ತಶತಿ ಪಾರಾಯಣಗಳು, ಮಹಾವಿದ್ಯೆ, ಲಕ್ಷ್ಮೀನಾರಾಯಣ ಹೃದಯ ಪಾರಾಯಣಗಳು ನೆರವೇರಿದವು. ಶ್ರೀಸೂಕ್ತ ಜಪ, ಭುವನೇಶ್ವರಿ ಜಪ, ದುರ್ಗಾ ಜಪಗಳನ್ನು ಪುರೋಹಿತರು ನೆರವೇರಿಸಿದರು. ಸುವಾಸಿನೀ ಹಾಗೂ ಕುಮಾರೀ ಪೂಜೆ ನಡೆಯಿತು.
ಸಂಜೆ ಪ್ರವಚನಮಂದಿರದಲ್ಲಿ ಶ್ರೀ ಶಾರದೆಯ ಉಯ್ಯಲೆ ಸೇವೆ ಯತಿವರ್ಯರ ಸಮ್ಮುಖದಲ್ಲಿ ನೆರವೇರಿತು. ಕಿರಿಯ ಶ್ರೀಗಳು ದಿಂಡಿಉತ್ಸವದಲ್ಲಿ ಭಾಗಿಯಾದ ಬಳಿಕ ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಸ್ಥಾನ ವಿದುಷಿ ಚೆನ್ಹೈನ ಸಿಕ್ಕಿಲ್ ಮಾಲಾ ಚಂದ್ರಶೇಖರ್ ಮತ್ತು ವೃಂದದವರಿಂದ ಕೊಳಲುವಾದನ ನೆರವೇರಿತು.
ಬೀದಿ ಉತ್ಸವದಲ್ಲಿ ಮೆಣಸೆ ಗ್ರಾಪಂ ಭಕ್ತಾದಿಗಳು ಭಾಗವಹಿಸಿದ್ದರು. ಜಯಪುರ-ಮೇಗುಂದ ಹೋಬಳಿ ಭಕ್ತಾದಿಗಳು, ಗೀರ್ವಾಣಿ ಮಹಿಳಾ ಮಂಡಳಿ, ಶ್ರೀ ಶಾರದಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ಸಂಘ, ವಿನಾಯಕ ಭಜನಾ ಮಂಡಳಿ, ಶ್ರೀರಾಮ ಸೇವಾ ಸಮಿತಿ ಹುಲ್ಸಗಾರು, ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದ ಭಜನಾ ಮಂಡಳಿ, ಶಾರದಾಂಬಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘ, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗಿಯಾದರು.
ರಾತ್ರಿ ನಡೆದ ದರ್ಬಾರು ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಅವರು ಭಾಗಿಯಾದರು. ವ್ಯಾಖ್ಯಾನ ಸಿಂಹಾಸನದಲ್ಲಿ ಇರಿಸಿದ ಶಾರದಾಉತ್ಸವ ಮೂರ್ತಿಯನ್ನು ಸ್ವರ್ಣ ರಥದಲ್ಲಿ ಇರಿಸಿ, ದೇವಾಲಯದಲ್ಲಿ ಮೂರು ಸುತ್ತಿನ ರಥೋತ್ಸವ ನಡೆಯಿತು. ಶ್ರೀ ಶಾರದೆ ಸನ್ನಿಧಿಯಲ್ಲಿ ಸಪ್ತಶತಿ ಪಾರಾಯಣವನ್ನು ಋತ್ವಿಜರು ನೆರವೇರಿಸಿದರು. ಜಗನ್ಮಾತೆಗೆ ಮಹಾಮಂಗಳಾರತಿ ನೆರವೇರಿದ ಬಳಿಕ ವೇದಗಳ ಪಾರಾಯಣ, ಪಂಚಾಂಗ ಶ್ರವಣ ಇತ್ಯಾದಿ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಶೃಂಗೇರಿ ಮಠದಲ್ಲಿ ನವರಾತ್ರಿ ಸಂದರ್ಭದಲ್ಲಿ ನಾನಾ ಪ್ರಾಂತ್ಯಗಳಿಂದ ಬರುವ ಪಾಲಕರು ಶ್ರೀ ಶಾರದೆಯ ಸನ್ನಿಧಿಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾರೆ. ಮಠದ ಆವರಣದಲ್ಲಿರುವ ವಾಗ್ದೇವಿ ಅಕ್ಷರಾಭ್ಯಾಸ ಮಂಟಪದಲ್ಲಿ ಪುರೋಹಿತರು ಶ್ರೀಗಣಪತಿಗೆ ಪ್ರಾರ್ಥನೆ ಸಲ್ಲಿಸಿ, ಶ್ರೀ ಶಾರದೆಯನ್ನು ಪೂಜಿಸಿ ಅಕ್ಕಿಯ ಮೇಲೆ ಪಾಲಕರ ಸಹಕಾರದಿಂದ ಮಕ್ಕಳ ಕೈಯಿಂದ ಓಂಕಾರ, ಶ್ರೀಕಾರ, ಶ್ರೀಸರಸ್ವತಿ ನಮಃ ಶ್ರೀ ಗುರುಭ್ಯೋನಮಃ ಬರೆಸುತ್ತಾರೆ. ಬಳಿಕ ಸ್ಲೇಟಿನಲ್ಲಿ ಕನ್ನಡ ಅಕ್ಷರಮಾಲೆಯನ್ನು ಬರೆಸಲಾಗುತ್ತದೆ. ಶ್ರೀ ಶಾರದೆ ಜ್ಞಾನವನ್ನು ನೀಡುವ ವಿದ್ಯಾದೇವತೆ. ಇಲ್ಲಿ ಅಕ್ಷರ ಕಲಿತವರು ವಿದ್ಯಾವಂತರಾಗುತ್ತಾರೆ ಎಂಬ ಶ್ರದ್ಧಾನಂಬಿಕೆ ಸರ್ವರಲ್ಲೂ ಇದೆ.