

ರಾಯಚೂರು ಜಿಲ್ಲೆಯಲ್ಲಿ ಆ.27 ರಂದು ಶ್ರೀಗೌರಿ ಗಣೇಶ ಚತುರ್ಥಿ ಹಬ್ಬವನ್ನು ಅರ್ಥಪೂರ್ಣವಾಗಿ, ಶಾಂತಿ ಸೌಹಾರ್ದಯುತವಾಗಿ ಆಚರಿಸಲು ಸಾರ್ವಜನಿಕರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ನಿತೀಶ್ ಕೆ.,ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಶ್ರೀಗೌರಿ ಗಣೇಶ ಚತುರ್ಥಿ ಹಬ್ಬದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹಬ್ಬವನ್ನು ಸಂಭ್ರಮದಿಅದ ಆಚರಿಸುವಂತೆ ವಿವಿಧ ಸಮಿತಿ ಮತ್ತು ಸಂಘ ಸಂಸ್ಥೆಗಳ ಪ್ರತಿನಿಧಿಗಳಿಗೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಹಬ್ಬದಲ್ಲಿ ಪಿಓಪಿ ಹಾಗೂ ರಾಸಾಯನಿಕ ಬಣ್ಣಗಳ ಮಿಶ್ರಿತ ಮೂರ್ತಿಗಳನ್ನು ಪ್ರತಿಷ್ಠಾಪಿಸದೇ ಪರಿಸರ ಸ್ನೇಹಿ ವಿಗ್ರಹಗಳನ್ನು ಸ್ಥಾಪಿಸಬೇಕು. ಜಿಲ್ಲೆಯಾದ್ಯಂತ ಮಣ್ಣಿನಿಂದ ತಯಾರಿಸಿದ ಗಣೇಶ ವಿಗ್ರಹಗಳನ್ನು ಸ್ಥಾಪಿಸಿ ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಎಲ್ಲ ಸಮಾಜ ಭಾಂದವರು ಭಾವೈಕ್ಯತೆಯಿಂದ ಎಲ್ಲರೂ ಒಡಗೂಡಿ ಹಬ್ಬ ಆಚರಿಸಬೇಕು. ಧ್ವನಿವರ್ಧಕಗಳಿಂದ ಯಾರಿಗೂ ಸಹ ತೊಂದರೆಯಾಗಬಾರದು.
ಹಿರಿಯ ನಾಗರಿಕರು, ಮಕ್ಕಳು, ಪ್ರಾಣಿಗಳಿಗೆ ತೊಂದರೆಯಾಗದಂತೆ ಶ್ರೀಗಣೇಶ ಮಂಡಳಿಗಳು ಮಾರ್ಗಸೂಚಿ ಪಾಲನೆಯ ಬಗ್ಗೆ ನಿಗಾವಹಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಹಕರಿಸಬೇಕೆಂದು ಎಂದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಎಲ್ಲರೂ ತಪ್ಪದೇ ಪೂರ್ವ ಪರವಾನಿಗೆಯನ್ನು ಸಂಬಅಧಿಸಿದ ಇಲಾಖೆಯವರಿಂದ ಪಡೆಯಬೇಕು. ನಿಗದಿತ ನಮೂನೆಯಲ್ಲಿ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಆಯೋಜಕರು ಸಲ್ಲಿಸುವ ಅರ್ಜಿಗಳನ್ನು ಸಂಬಅಧಿಸಿದ ಇಲಾಖೆಗಳು ಜಂಟಿ ತಪಾಸಣೆ ಮಾಡಿ ನಿಯಮಾನುಸಾರ ಪರವಾನಿಗೆಯನ್ನು ನೀಡಲು ಕ್ರಮ ವಹಿಸುತ್ತವೆ. ರಾತ್ರಿ 10.30ರೊಳಗಾಗಿ ವಿಗ್ರಹಗಳನ್ನು ವಿಸರ್ಜನೆ ಮಾಡುವಂತೆ ಸಮಯ ನಿಗದಿಗೊಳಿಸಲಾಗಿದೆ. ಅದರಂತೆ ನಿಯಮಾನುಸಾರ ವಿಸರ್ಜನೆ ಮಾಡಬೇಕು. ಶಬ್ದ ಮಾಲಿನ್ಯ ಮಾಡುವ ಬೃಹತ್ ಧ್ವನಿವರ್ಧಕಗಳನ್ನು ನಿಷೇಧಿಸಲಾಗಿದ್ದು, ಮಾರ್ಗಸೂಚಿಯನ್ವಯ ಧ್ವನಿವರ್ಧಕ ಬಳಸಬೇಕು. ನಿಯಮ ಉಲ್ಲಂಘಿಸಿದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಗಣೇಶ ವಿಸರ್ಜನೆಯ ದಿನಗಳಂದು ವಿದ್ಯುತ್ ವ್ಯತಯವಾಗದಂತೆ ನಿರಂತರ ವಿದ್ಯುತ್ ಪೂರೈಸಲು ಜೆಸ್ಕಾಂ ಇಲಾಖೆ ಕ್ರಮ ವಹಿಸಬೇಕು. ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಗಣೇಶ ವಿಸರ್ಜನೆಯ ದಿನದಂದು ಸಂಚಾರ ವ್ಯವಸ್ಥೆಗೆ ಅಡೆ ತಡೆಯಾಗದಂತೆ ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗದಂತೆ ಸಹಕರಿಸಬೇಕು. ಅಲ್ಲದೆ ಅಗತ್ಯವಿರುವ ಕಡೆ ಸಿ.ಸಿ.ಕ್ಯಾಮರಾಗಳನ್ನು ಆಯೋಜಕರು ಮತ್ತು ಸಂಬಂಧಿತ ಇಲಾಖೆಗಳು ಅಳವಡಿಸಬೇಕೆಂದು ಸೂಚನೆ ನೀಡಿದರು.
ಮಹಾನಗರ ಪಾಲಿಕೆ ಆಯುಕ್ತ ಜುಬಿನ ಮೊಹಪಾತ್ರ ಮಾತನಾಡಿ, ಪರಿಸರ ರಕ್ಷಣೆಯು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರ ಹಾನಿಯಾಗದಂತೆ ಗಣೇಶೋತ್ಸವ ಆಚರಣೆ ಮಾಡಬೇಕು. ಪಿಓಪಿ ವಿಗ್ರಹಗಳನ್ನು ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ನಿಷೇಧಿಸಲಾಗಿದೆ. ಇದನ್ನು ಅರಿತು ರಾಯಚೂರ ಸಿಟಿಯ ನಾಗಕರಿಕರು ನಾವು ಪಿಓಪಿ ಗಣೇಶ ಮೂರ್ತಿ ಬಳಸುವುದಿಲ್ಲ ಎಂದು ಸಂಕಲ್ಪ ಮಾಡಿ ಮಣ್ಣಿನಿಂದ ನಿರ್ಮಿಸಿದ ವಿಗ್ರಹಗಳ ಬಳಕೆಗೆ ಒತ್ತು ಕೊಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದ್ದು ಯಾರು ಸಹ ಬಳಸಕೂಡದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಪಿಗಳಾದ ಹರೀಶ ಜಿ., ಕುಮಾರಸ್ವಾಮಿ,ಶ್ರೀನಿವಾಸ ಪತಂಗೆ,ರವೀಂದ್ರ ಜಲ್ದಾರ್ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಮಾಜದ ಮುಖಂಡರು, ಗಜಾನನ ಮಂಡಳಿಗಳ ಪದಾಧಿಕಾರಿಗಳು ಇದ್ದರು.