

ಮಡಿಕೇರಿ: ವಿಶ್ವ ರಾಷ್ಟ್ರ ಸಂಸ್ಥೆಯ ಜಾಗತಿಕ ಆದಿಮ ಸಂಜಾತ ಜನಾಂಗಗಳ ಹಕ್ಕುಗಳ ದಿನಾಚರಣೆಯ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಅಂತರಾಷ್ಟ್ರೀಯ ಕಾನೂನಿನ್ವಯ ಕೊಡವರ ಸಂವಿಧಾನಿಕ ಹಕ್ಕುಗಳನ್ನು ಮಂಡಿಸಿತು.
ಸಾಂವಿಧಾನಿಕ ಹಕ್ಕುಗಳಿಂದ ವಂಚಿತವಾಗಿರುವ ಆದಿಮಸಂಜಾತ ಕೊಡವ ಬುಡಕಟ್ಟು ಜನರ ಹಕ್ಕೋತ್ತಯದ ಬಗ್ಗೆ ದೇಶದ ಆಡಳಿತ ವ್ಯವಸ್ಥೆ ಮತ್ತು ವಿಶ್ವದ ಗಮನ ಸೆಳೆಯವ ಸಲುವಾಗಿ ಸತ್ಯಾಗೃಹ ನಡೆಸಿರುವುದಾಗಿ ಧರಣಿಯ ನೇತೃತ್ವ ವಹಿಸಿದ್ದ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡವರು ಈ ಪವಿತ್ರ ಕೊಡವ ನೆಲದ ಮೂಲನಿವಾಸಿ ಆದಿಮಸಂಜಾತ ಬುಡಕಟ್ಟು ಸಮುದಾಯದವರಾಗಿದ್ದಾರೆ. ಕೊಡವರಿಗಿರುವ ಏಕೈಕ ನೆಲೆ ಕೊಡವ ಲ್ಯಾಂಡ್ ಕೊಡವರ ಸಾಂಪ್ರದಾಯಿಕ ಹಾಗೂ ಅವಿಭಾಜ್ಯ ಮಾತೃಭೂಮಿಯಾಗಿದೆ. ಕೊಡವರ ಜನ್ಮಭೂಮಿ ಈ ಭೂಮಂಡಲದಷ್ಟೇ ಪ್ರಾಚೀನವಾಗಿದೆ. ಕೊಡವ ಬುಡಕಟ್ಟು ಜನಾಂಗವು ಮಾನವ ಜನಾಂಗದ?್ಟೇ ಹಳೆಯದಾಗಿದೆ. ಈ ಕೊಡವ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಯನ್ನು ಶಾಸನಬದ್ಧವಾಗಿ ಅನುಮೋದಿಸಬೇಕು ಎಂದು ಒತ್ತಾಯಿಸಿದರು.
ಹಕ್ಕೋತ್ತಾಯಗಳ ಜ್ಞಾಪನಾ ಪತ್ರವನ್ನು ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯರವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು. ಆದಿಮಸಂಜಾತ ಕೊಡವ ಬುಡಕಟ್ಟು ಸಮುದಾಯದ ಪ್ರಾಚೀನ ಸಾಂಪ್ರದಾಯಿಕ ಪರಿಕರಗಳ ಪ್ರದರ್ಶನದ ಮೂಲಕ ಸಿಎನ್‌ಸಿ ಪ್ರಮುಖರು ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಕಲಿಯಂಡ ಮೀನಾ ಪ್ರಕಾಶ್, ಚೋಳಪಂಡ ಜ್ಯೋತಿ ನಾಣಯ್ಯ, ಮುದ್ದಿಯಡ ಲೀಲಾವತಿ, ಕಲಿಯಂಡ ಪ್ರಕಾಶ್, ಅಳ್ಮಂಡ ಜೈ, ಪಟ್ಟಮಾಡ ಕುಶಾ, ಬೇಪಡಿಯಂಡ ದಿನು, ಅಜ್ಜಿಕುಟ್ಟೀರ ಲೋಕೇಶ್ ಇತರರು ಪಾಲ್ಗೊಂಡಿದ್ದರು.