ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಫಲಕ ವಿಷಯ ಕುರಿತಂತೆ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ಎಸ್‌ಸಿ ಸಮುದಾಯದವರ ಮೇಲೆ ಎಸ್‌ಟಿ ಸಮುದಾಯದವರು ನಡೆಸಿರುವ ದೌರ್ಜನ್ಯ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ಎಂದು ಮಾಜಿ ಮೇಯರ್ ಪುರುಷೋತ್ತಮ್ ಬೇಸರ ವ್ಯಕ್ತಪಡಿಸಿದರು.
ಶೀಘ್ರದಲ್ಲೇ ಈ ಮಾನವ ವಿರೋಧಿ ಕೃತ್ಯ ಖಂಡಿಸಿ ನಂಜನಗೂಡಿನಿಂದ ಹಲ್ಲರೆಗೆ ಶಾಂತಿ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅಂಬೇಡ್ಕರ್ ಅವರ ಬಗ್ಗೆ ಒಂದು ಸಮುದಾಯದವರಿಗೆ ಏಕೆ ಅಷ್ಟೊಂದು ಅಸಹನೆ, ಆಕ್ರೋಶ ಎಂಬುದು ಅರ್ಥವಾಗುತ್ತಿಲ್ಲ. ಅಲ್ಲಿ ಆ ರೀತಿ ಘಟನೆ ನಡೆಯಲು ಬಿಜೆಪಿ ಕೈವಾಡವೂ ಇರಬಹುದು. ಜತೆಗೆ ಅಲ್ಲಿನ ಗ್ರಾಮ ಪಂಚಾಯಿತಿ ಬೇಜವಾಬ್ದಾರಿಯೂ ಕಾರಣವಾಗಿದೆ ಎಂದರು.
ಪಿಡಿಒ ಮತ್ತು ತಾಪಂ ಇಒ ವಿರುದ್ಧ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ನಾಮಫಲಕಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಬೇಕಾಗಿದ್ದ ಸಭೆಗೆ ಗೈರು ಹಾಜರಾದ ಸವರ್ಣೀಯ ಗ್ರಾಪಂ ಸದಸ್ಯರ ಸದಸ್ಯತ್ವ ರದ್ದುಗೊಳಿಸಬೇಕು. ಜತೆಗೆ ಹಲ್ಲರೆ ಗ್ರಾಪಂ ಮಾಜಿ ಅಧ್ಯಕ್ಷ ಮಹದೇವಸ್ವಾಮಿ ಅವರು ಅಂಬೇಡ್ಕರ್ ಅವರನ್ನು ಅಪಮಾನಿಸುವ ಹೇಳಿಕೆ ನೀಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾಪಂ ಆಡಳಿತ ಮಂಡಳಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಎಸ್‌ಸಿ ಸಮುದಾಯದವರಿಗೆ ಆಗಿರುವ ನಷ್ಟ ತುಂಬಿಕೊಡಬೇಕು. ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಂತಹ ದುಷ್ಕೃತ್ಯ ಮತ್ತೆ ಜರುಗದಂತೆ ನೋಡಿಕೊಳ್ಳಬೇಕು. ಶಾಂತಿಸಭೆ ಹೆಸರಿನಲ್ಲಿ ದೌರ್ಜನ್ಯ ಮುಚ್ಚಿ ಹಾಕುವ ಯತ್ನ ನಡೆಸಬಾರದು ಎಂದು ಆಗ್ರಹಿಸಿದರು.
ಮುಖಂಡರಾದ ಸೋಮಯ್ಯ ಮಲೆಯೂರು, ದೇವಗಳ್ಳಿ ಸೋಮಶೇಖರ್, ಸತೀಶ್, ಪ್ರದೀಪ್‌ಕುಮಾರ್, ವಿಷಕಂಠ ಇದ್ದರು.