

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಹಾಗೂ ಮೈಶುಗರ್ ಕಾರ್ಖಾನೆ ಮರು ಆರಂಭವಾದರೆ ಮಾತ್ರ ರೈತನಾಯಕ ದಿ.ಕೆ.ಎಸ್.ಪುಟ್ಟಣ್ಣಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ನೂತನ ಸಚಿವ ಕೆ.ಸಿ.ನಾರಾಯಣಗೌಡ ಅಭಿಪ್ರಾಯಪಟ್ಟರು.
ತಾಲೂಕಿನ ಎಣ್ಣೆಹೊಳೆಕೊಪ್ಪಲು ಗ್ರಾಮದಲ್ಲಿ ಭಾನುವಾರ ರಾತ್ರಿ ಕಾವೇರಿ ಗೋಪಾಲಕರ ಸಮಿತಿ ಮತ್ತು ಪಶುಪಾಲನಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತ ಗೋಪಾಲಕರಿಗೆ ಬಹುಮಾನ ವಿತರಿಸಿ ಮಾತನಾಡಿ, ರೈತರ ಪರವಾದ ಹೋರಾಟದಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರು ಪಾಲ್ಗೊಳ್ಳುತ್ತಾರೆ ಎಂದರೆ ಸರ್ಕಾರವೇ ನಡುಗುವಂತಹ ಪರಿಸ್ಥಿತಿ ಇತ್ತು. ಹೀಗಾಗಿ ಸರ್ಕಾರ ಪುಟ್ಟಣ್ಣಯ್ಯ ಅವರ ಜತೆ ಮಾತುಕತೆ ನಡೆಸಿ ರೈತರ ಬೇಡಿಕೆಗಳಿಗೆ ಅಸ್ತು ಎನ್ನುತ್ತಿದ್ದವು ಎಂದು ಪುಟ್ಟಣ್ಣಯ್ಯ ಅವರ ಹೋರಾಟ ಸ್ಮರಿಸಿದರು.
ಮೈಶುಗರ್ ಮತ್ತು ಪಿಎಸ್‌ಎಸ್ ಕಾರ್ಖಾನೆಗಳನ್ನು ಸರ್ಕಾರ ನಡೆಸಲು ಸಾಧ್ಯವಿಲ್ಲ. ಆದರೆ ಶೀಘ್ರವಾಗಿ ಖಾಸಗಿಯವರಿಗೆ ಗುತ್ತಿಗೆ ನೀಡುವ ಮೂಲಕ ಎರಡು ಕಾರ್ಖಾನೆಗಳನ್ನು ಪ್ರಾರಂಭಿಸಲಾಗುವುದು. ರೈತರಿಗೆ ಈ ಬಗ್ಗೆ ಯಾವುದೇ ಅನುಮಾನ ಬೇಡ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿ ಜತೆ ಚರ್ಚಿಸಲಾಗಿದೆ. ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು. ರೈತರು ನಮ್ಮ ಜೀವನಾಡಿ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.
ಗೋವುಗಳ ಸಾಕಣೆ ಮತ್ತು ಸಂರಕ್ಷಣೆ ಮಾಡುವ ಮೂಲಕ ಕ್ಷೀರ ಕ್ರಾಂತಿಯಾಗಬೇಕಿದೆ. ಇದಕ್ಕೆ ಹಾಲು ಕರೆಯುವ ಸ್ಪರ್ಧೆ ಪ್ರೋತ್ಸಾಹದಾಯಕವಾಗಿದೆ. ಬೇಸಾಯದ ಜತೆಗೆ ಹೈನುಗಾರಿಕೆ ರೈತರ ಉಪಕಸುಬಾಗಿದ್ದು, ಗ್ರಾಮೀಣ ಪ್ರದೇಶದ ರೈತರ ಆರ್ಥಿಕ ಸ್ವಾವಲಂಭನೆಗೆ ಹೈನುಗಾರಿಕೆ ವರದಾನವಾಗಿದೆ ಎಂದರು.
ರೈತ ನಾಯಕಿ ಸುನಿತಾ ಪುಟ್ಟಣ್ಣಯ್ಯ ಮಾತನಾಡಿದರು. ಸಚಿವ ಕೆ.ಸಿ.ನಾರಾಯಣಗೌಡ ಹಾಗೂ ಕೆಜಿಎಫ್ ಚಲನಚಿತ್ರದ ಖಳನಟ ಗರುಡ ಅನಿಲ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸ್ಪರ್ಧೆಯಲ್ಲಿ 49.380 ಕೆ.ಜಿ ಹಾಲು ಕರೆದು ಪ್ರಥಮ ಬಹುಮಾನ ಗಳಿಸಿದ ಬೆಂಗಳೂರಿನ ಜೆಪಿ ನಗರದ ಚಂದ್ರಮನೆ ಪ್ರಕಾಶ್ 1ಲಕ್ಷ ನಗದು ಹಾಗೂ ಸ್ಮರಣ ಸಂಚಿಕೆ. 48.400 ಕೆಜಿ ಹಾಲು ಕರೆದು ದ್ವೀತೀಯ ಬಹುಮಾನ ಪಡೆದ ನೆಲಮಂಗಲದ ವೆಂಕಟೇಶ್ 75 ಸಾವಿರ ನಗದು, 46.640 ಕೆ.ಜಿ ಹಾಲು ಕರೆದು ತೃತೀಯ ಬಹುಮಾನ ಗಿಟ್ಟಿಸಿದ ಬೆಂಗಳೂರು ಮಲ್ಲಿಗೆ ತೋಟದ ಗೀತಾ ಯತೀಶ್ 50 ಸಾವಿರ ನಗದು, 41.940 ಕೆ.ಜಿ ಹಾಲು ಕರೆದ ಸಿ.ಜಗನ್ನಾಥ್ ನಾಲ್ಕನೇ ಬಹುಮಾನದೊಂದಿಗೆ 25 ಸಾವಿರ ನಗದು ಹಾಗೂ 41.640 ಕೆ.ಜಿ ಹಾಲು ಕರೆದ ಪೈ.ಸುರೇಶ್ ಅವರು 10 ಸಾವಿರ ನಗದು ಬಹುಮಾನದೊಂದಿಗೆ ಐದನೇ ಬಹುಮಾನ ಗಿಟ್ಟಿಸಿದರು. ರಾಜ್ಯದ ಹಲವು ಭಾಗಗಳಿಂದ ಆಗಮಿಸಿದ್ದ ರೈತರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಶ್ರೀನಿವಾಸ್, ಮನ್‌ಮುಲ್ ಅಧ್ಯಕ್ಷ ರಾಮಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಷ್, ಶ್ರೀರಾಮಸೇನೆಯ ಮಹಿಳಾ ಆದ್ಯಕ್ಷೆ ಯಶಸ್ವಿನಿ ಗೌಡ, ಬಿಜೆಪಿ ಮುಖಂಡರಾದ ಸಿದ್ದರಾಮಯ್ಯ, ಎಚ್.ಎನ್.ಮಂಜುನಾಥ್, ಕನಗೋನಹಳ್ಳಿ ಪರಮೇಶ್, ಎಣ್ಣೆಹೊಳೆಕೊಪ್ಪಲು ಮಂಜು, ರಾಘು ಇತರರಿದ್ದರು.