

ಸತೀಶ್ ಚಿಕ್ಕಕಣಗಾಲ್ ಆಲೂರು
ಧರ್ಮದ ಪರಿಪಾಲನೆಯಿಂದ ಮಾತ್ರ ನಾಡಿನಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ಯಸಳೂರು ತೆಂಕಲಗೂಡು ಬೃಹನ್ಮಠದ ಪೀಠಾಧ್ಯಕ್ಷ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಪಾಳ್ಯ ಹೋಬಳಿ ಕಾರ್ಜುವಳ್ಳಿ ಗ್ರಾಮದಲ್ಲಿರುವ ಶ್ರೀಮದ್ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಯ 46ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಸದಾಶಿವ ಶಿವಾಚಾರ್ಯ ಸ್ವಾಮೀಜಿಯ ಪಟ್ಟಾಧಿಕಾರದ 4ನೇ ವಾರ್ಷಿಕೋತ್ಸವ-ಜನ್ಮ ವರ್ಧಂತಿ ಮಹೋತ್ಸವದ ಜತೆಗೆ ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮ ಸದ್ಭಾವನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಯುಗದಲ್ಲಿ ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರದಿಂದ ಮಕ್ಕಳು ಹೊರ ಬರುತ್ತಿದ್ದಾರೆ. ಗುರು-ಹಿರಿಯರ ಬಗ್ಗೆ ಗೌರವ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕಿದೆ. ಪಾಲಕರಾದವರು ಮಕ್ಕಳಿಗೆ ತಿಳಿವಳಿಕೆ ನೀಡಬೇಕು. ಇದರಿಂದ ಸುಭದ್ರ ಸಮಾಜ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಆಧುನಿಕತೆ ಭರದಲ್ಲಿ ಪರಂಪರೆಯನ್ನು ಮರೆತು ಸಾಗುತ್ತಿರುವುದು ಮುಂದಿನ ಪೀಳಿಗೆಗೆ ಮಾರಕವಾಗಲಿದೆ. ನಮ್ಮ ಸಂಸ್ಕೃತಿ, ಸಾಹಿತ್ಯವನ್ನು ಭವಿಷ್ಯದ ಜನಾಂಗಕ್ಕೆ ಉಳಿಸಿಕೊಂಡು ಹೋಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿವೆ ಎಂದರು.
ನಾಡಿನ ವೀರಶೈವ ಪಂಚ ಪೀಠಗಳಲ್ಲಿ ಒಂದಾಗಿರುವ ರಂಭಾಪುರಿ ಪೀಠವು ಧರ್ಮದಿಂದ ವಿಶ್ವಕ್ಕೆ ಶಾಂತಿ ಎಂಬ ಸಂದೇಶದಡಿ ಕಾರ್ಯನಿರ್ವಹಿಸುತ್ತಿದ್ದು. ಸಂಕೀರ್ಣಮಯವಾದ ಜಗತ್ತಿನಲ್ಲಿ ಅವರವರ ಭಾವ, ಅವರವರ ಜಾತಿ, ಧರ್ಮಗಳಿಗೆ ಒಳ್ಳೆಯದಾಗುವುದರ ಜತೆಗೆ ಇಡೀ ಮನುಕುಲಕ್ಕೆ ಒಳಿತಾಗಲಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಧರ್ಮರಾಜ್ ಹೊಂಕರವಳ್ಳಿ ಮಾತನಾಡಿ, ಕೃಷಿ ಎನ್ನುವುದು ಲಾಭವೂ ಹೌದು, ನಷ್ಟವೂ ಹೌದು. ವ್ಯವಸ್ಥಿತವಾದ ರೀತಿಯಲ್ಲಿ ಕೃಷಿ ಮಾಡಿದರೆ ಖಂಡಿತವಾಗಿ ಭೂಮಿ ನಮ್ಮ ಕೈ ಹಿಡಿಯುತ್ತದೆ. ಬೆಳೆಗಳಿಗೆ ಅಗತ್ಯ ಪೋಷಕಾಂಶ ಒದಗಿಸುವುದು ಮಹತ್ವದ ಕೆಲಸ. ಯಾವ, ಯಾವ ಬೆಳೆಗೆ ಎಷ್ಟು ಗೊಬ್ಬರ ಹಾಕಬೇಕು ಎನ್ನುವುದು ತಿಳಿದಿದ್ದರೆ ಒಳ್ಳೆಯದು. ಅನಗತ್ಯವಾಗಿ ಗೊಬ್ಬರ ಸುರಿಯುವುದರಿಂದ ಹೆಚ್ಚಿನ ಲಾಭವೇನು ಆಗುವುದಿಲ್ಲ ಎಂದು ತಿಳಿಸಿದರು.
ಹೆಚ್ಚಿನ ಇಳುವರಿಗೆ ರಾಸಾಯನಿಕ ಗೊಬ್ಬರ ಬಳಸಬೇಕೆಂಬುದು ಬಹುತೇಕ ರೈತರಿಗೆ ತಿಳಿದಿರುವ ವಿಷಯ. ರಾಸಾಯನಿಕ ಗೊಬ್ಬರಗಳಿಂದ ಬೆಳೆಗಳಿಗೆ ಕೂಡಲೇ ಪೋಷಕಾಂಶಗಳು ದೊರೆಯುತ್ತವೆ. ವ್ಯವಸ್ಥಿತವಾಗಿ ಸಾವಯವ ಗೊಬ್ಬರ ಬಳಸುವುದರಿಂದಲೂ ಹೆಚ್ಚಿನ ಇಳುವರಿ ಪಡೆಯಬಹುದು. ಆದರೆ ಯಾವುದೇ ಗೊಬ್ಬರ ಬಳಸುವುದಕ್ಕಿಂತ ಮುಂಚೆ ಎಷ್ಟು ಹಾಕಬೇಕು ಎಂಬುದನ್ನು ಮಣ್ಣಿನ ಪರೀಕ್ಷೆ ಮಾಡಿಸಿ ತಿಳಿಯುವುದು ಒಳ್ಳೆಯದು. ರಾಸಾಯನಿಕ ಗೊಬ್ಬರ ಬಳಸುವವರಂತೂ ಮಣ್ಣು ಪರೀಕ್ಷೆ ಮಾಡಿಸಲೇಬೇಕು ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಶ್ರೀಮಠದ ಆವರಣದಲ್ಲಿ ಸೋಮವಾರ ಬೆಳಗ್ಗೆಯಿಂದ ಶ್ರೀ ಜಗದ್ಗುರು ಪಂಚಾಚಾರ್ಯ ಧ್ವಜಾರೋಹಣ, ಗಂಗಾಪೂಜೆ, ಕಂಕಣಧಾರಣೆ, ಮಹಾಸಂಕಲ್ಪ, ಪುಣ್ಯಾಹ, ಸ್ವಸ್ತಿವಾಚನ, ನವಗ್ರಹಯುಕ್ತ ಪ್ರಮುಖ ಕಲಶಾರಾಧನೆಗಳು, ಶ್ರೀ ವೀರಭದ್ರಸ್ವಾಮಿ ಮೂಲಮಂತ್ರ ಹೋಮ, ಪೂರ್ಣಾಹುತಿ, ರಕ್ಷಾಧಾರಣೆ ನೆರವೇರಿದವು. ಜತೆಗೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಸನ್ನಿಧಿಯಲ್ಲಿ ಮಹಾರುದ್ರಾಭಿಷೇಕ, ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ ನಡೆಯಿತು. ಶ್ರೀ ವನದುರ್ಗಾ ಪರಮೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ದುರ್ಗಾಸೂಕ್ತ ಪಾರಾಯಣ, ಪೂರ್ವಕ ಕ್ಷೀರಾಭಿಷೇಕ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಮಹಾನೈವೇದ್ಯ, ಶ್ರೀಇಷ್ಟನಾಗ, ಸಿದ್ದಿನಾಗ, ಮುತ್ತಿನಾಗ ದೇವರ ಸನ್ನಿಧಿಯಲ್ಲಿ ಪವಮಾನಯುಕ್ತ ಪಂಚಾಮೃತಾಭಿಷೇಕ, ಪುಷ್ಪಾರ್ಚನೆ, ಮಹಾನೈವೇದ್ಯ, ಮಹಾಮಂಗಳಾರತಿ, ಶಿವಸಹಸ್ರನಾಮ ಸ್ತೋತ್ರ ಪಾರಾಯಣ ಜರುಗಿದವು.
ಶ್ರೀ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವವು ಬೆಂಗಳೂರಿನ ಗಾನಸುಧಾ ಭಜನಾ ಮಂಡಳಿ ಸಂಸ್ಥಾಪಕ ಶಿವಶಂಕರ ಶಾಸ್ತ್ರಿ ಹಾಗೂ ಮತ್ತು ಕೆ.ಎಸ್.ವೀರಪ್ಪ ದೇವರು ಪೂಜಾ ಕಾರ್ಯಗಳನ್ನು ನೆರವೇರಿಸಿದರು.
ಸಂಜೆ 5 ಗಂಟೆಗೆ ನಡೆದ ಧರ್ಮ-ಸದ್ಭಾವನಾ ಸಮಾರಂಭದಲ್ಲಿ ಬೆಂಗಳೂರಿನ ಸಿವಿಲ್ ಕಾಂಟ್ರಾಕ್ಟರ್ ಎಂ.ವಿ. ತಾಂಡೇಶ್, ಕಾರ್ಜುವಳ್ಳಿ ಹಿರೇಮಠದ ವಾರ್ತಾ ಸಂಯೋಜಕ ಸತೀಶ್ ಚಿಕ್ಕಕಣಗಾಲ್, ಭೈರಾಪುರ ಮಠದ ವಾರ್ತಾ ಸಲಹೆಗಾರ ಬಿ.ಎನ್ ನವೀನ್ ಕುಮಾರ್ ಹಾಗೂ ಕೆರೆಹಳ್ಳಿಯ ವೀರಶೈವ ಮುಖಂಡ ಕೆ.ಎಂ.ನಿಂಗರಾಜ್ ಅವರನ್ನು ಶ್ರೀ ಮಠದ ವತಿಯಿಂದ ಗೌರವಿಸಲಾಯಿತು. ಬೇಲೂರಿನ ವನ್ಯ ಗೋಪಿನಾಥ್ ಮತ್ತು ದುಂಬಿ ಗೋಪಿನಾಥ್ ಅವರಿಂದ ಭರತನಾಟ್ಯ ಜರುಗಿತು.
ಹಾರನಹಳ್ಳಿ ರಾಮಲಿಂಗೇಶ್ವರ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಸಂಘದ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ, ಸಹಕಾರ್ಯದರ್ಶಿ ಡಾ.ಜಯರಾಜ್, ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಮಹೇಶ್ ಚಿಕ್ಕೋಟೆ, ವೀರಶೈವ ಮುಖಂಡ ಲಿಂಗರಾಜು ಕೆರೆಹಳ್ಳಿ, ಪುರೋಹಿತರಾದ ಹಾಸನದ ದರ್ಶನ್ ಡಿ.ಆರಾಧ್ಯ, ಆಲೂರಿನ ಯತೀಶ್ ಶಾಸ್ತ್ರಿ, ಕಾರ್ಜುವಳ್ಳಿಯ ಕೆ.ಪಿ.ಮಲ್ಲೇಶ್, ಶಿಕ್ಷಕ ಈ. ಸಿ. ಚಂದ್ರು, ವಕೀಲೆ ಮೋನಿಷಾ ಮುರುಚೂರು ಮತ್ತಿತರರು ಇದ್ದರು.