ರಾಜಯೋಗದಿಂದ ನೆಮ್ಮದಿ

ckm yoga
ಬುಕ್ಕಾಂಬುದಿ ಗ್ರಾಮದಲ್ಲಿ ಆಯೋಜಿಸಿದ್ದ ರಾಜಯೋಗ ಶಿಬಿರ ಸಪ್ತಾಹದಲ್ಲಿ ಗ್ರಾಪಂ ಅಧ್ಯಕ್ಷೆ ಮುಬೀನ ಬಾನು ಮಾತನಾಡಿದರು. ವಿನೋದಾ, ಎಂ.ಬಿ.ಸುರೇಶ್, ಬಿ.ಕೆ.ಜಯಂತಿ, ಬಿ.ಜಿ.ರವಿ ಇತರರಿದ್ದರು.
Published on

ಚಿಕ್ಕಮಗಳೂರು: ಯಾಂತ್ರಿಕ ಬದುಕಿನಲ್ಲಿ ಒತ್ತಡ ನಿವಾರಣೆ ಹಾಗೂ ಮಾನಸಿಕ ನೆಮ್ಮದಿಗಾಗಿ ರಾಜಯೋಗ ಶಿಬಿರ ಸಹಕಾರಿ ಎಂದು ಬುಕ್ಕಾಂಬುದಿ ಗ್ರಾಪಂ ಅಧ್ಯಕ್ಷೆ ಮುಬೀನ ಬಾನು ಹೇಳಿದರು.

ಅಜ್ಜಂಪುರ ತಾಲೂಕಿನ ಬುಕ್ಕಾಂಬುದಿ ಗ್ರಾಮದ ಆತ್ಮದರ್ಶನ ಭವನದಲ್ಲಿ ಪ್ರಜಾಪಿತ ಬ್ರಹ್ಮಕುಮಾರೀ ಈಶ್ವರಿಯ ವಿಶ್ವವಿದ್ಯಾಲಯದಿಂದ ಏರ್ಪಡಿಸಿದ್ದ ರಾಜಯೋಗ ಶಿಬಿರ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವನದಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ಸಾಧಿಸಲು ಯೋಗ ಅಗತ್ಯ. ಇದು ನಮ್ಮ ಇಂದ್ರಿಯಗಳನ್ನು ನಿಯಂತ್ರಿಸುತ್ತದೆ. ಭಯ, ಅಸೂಯೆ, ದ್ವೇಷ, ಅಹಂಕಾರ ಇತ್ಯಾದಿ ದುರ್ಗುಣಗಳನ್ನು ದೂರವಾಗಿಸಲು ರಾಜಯೋಗ ಅಗತ್ಯವಾಗಿದೆ ಎಂದರು.
ಪ್ರಪಂಚ ಎಷ್ಟೇ ಆಧುನಿಕತೆಯಲ್ಲಿ ಮುಂದುವರಿದರೂ ಚಿಂತೆ, ಒತ್ತಡದಿಂದ ಪಾರಾಗಲು ಔಷಧ ಲಭ್ಯವಾಗಿಲ್ಲ. ಆದರೆ ಭಾರತೀಯ ಸಂಸ್ಕೃತಿಯ ಪ್ರಾಚೀನ ರಾಜಯೋಗ ಇದಕ್ಕೆ ಮದ್ದು ನೀಡಲಿದೆ. ಪ್ರತಿಯೊಬ್ಬರೂ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ ಮಾತನಾಡಿ, ಪರಮಾತ್ಮನು ಶಕ್ತಿ ಹಾಗೂ ಗುಣಗಳ ಸಮುದ್ರ. ಆತನೊಂದಿಗೆ ಯೋಗ ಮಾಡಿದಾಗ ನಮ್ಮಲ್ಲಿ ಧನಾತ್ಮಕ ಅಲೆಗಳು ಹಾಗೂ ಯೋಗಿಯ ಲಕ್ಷಣಗಳು ಹುಟ್ಟಿಕೊಳ್ಳುತ್ತವೆ. ಇದು ಜೀವನವಿಡೀ ಯೋಗಮಯವಾಗಲು ಸಾಧ್ಯವಾಗುತ್ತದೆ. ನಿತ್ಯ ರಾಜಯೋಗದಲ್ಲಿ ತಲ್ಲಿನನಾದರೇ ಸದಾ ಜ್ಯೋತಿಯಂತೆ ಪ್ರಜ್ವಲಿಸುವ ಭಾವ ಬೆಳೆಯುತ್ತದೆ ಎಂದರು.
ಗ್ರಾಮದಲ್ಲಿ ಜ.2ರಿಂದ 8 ರವರೆಗೆ ರಾಜಯೋಗ ಶಿಬಿರ ಆಯೋಜಿಸಲಾಗಿದೆ. ಜತೆಗೆ ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಜ್ಜಂಪುರ ಭಾಗದಲ್ಲಿ ಸ್ಥಳೀಯ ಶಾಖೆ ತೆರೆಯುವ ಉದ್ದೇಶ ಹೊಂದಿದ್ದು, ತಿಂಗಳ ಅಂತ್ಯದೊಳಗೆ ಆರಂಭವಾಗಲಿದೆ ಎಂದು ಹೇಳಿದರು.
ಶ್ರೀ ಪಂಪ ವಿರೂಪಾಕ್ಷೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎಂ.ರಾಜು ಮಾತನಾಡಿ, ಶರೀರಕ್ಕೆ ಯೋಗ ಮತ್ತು ಪ್ರಾಣಾಯಾಮದಷ್ಟೇ ಮನಸ್ಸು ಬಲಿಷ್ಟವಾಗಿರಲು ರಾಜಯೋಗ ಅಗತ್ಯ. ಹೀಗಾಗಿ ಬೆಳಗಿನ ಜಾವ ಯೋಗ ಮಾಡುವುದರಿಂದ ರೋಗಗಳನ್ನು ಹೊಡೆದೋಡಿಸುವ ಶಕ್ತಿ ಲಭಿಸುತ್ತದೆ ಎಂದರು.
ಗ್ರಾಪಂ ಉಪಾಧ್ಯಕ್ಷೆ ವಿನೋದಾ, ಸದಸ್ಯ ಗುರುಮೂರ್ತಿ, ಮಾಜಿ ಅಧ್ಯಕ್ಷ ಬಿ.ಮಹೇಶ್ವರಪ್ಪ, ಪಿಡಿಒ ಎಂ.ಬಿ.ಸುರೇಶ್, ನವೀನ್, ಚಂದ್ರ ಶೇಖರಪ್ಪ, ಬಿ.ಕೆ.ಜಯಂತಿ, ಬಿ.ಜಿ.ರವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net