ಶಾಂತಿ, ಸರಳವಾಗಿ ರಂಜಾನ್ ಆಚರಿಸಲು ತಹಸೀಲ್ದಾರ್ ಎಸ್.ಮಹಾಬಲೇಶ್ವರ್ ಮನವಿ

210420 Kudligi Muslim Leaders Meeting
Published on

ಕೂಡ್ಲಿಗಿ: ಸರ್ಕಾರದ ಮಾರ್ಗಸೂಚಿಯಂತೆ ರಂಜಾನ್ ಹಬ್ಬವನ್ನು ಶಾಂತಿ ಹಾಗೂ ಸರಳವಾಗಿ ಆಚರಿಸಬೇಕು ಎಂದು ತಹಸೀಲ್ದಾರ್ ಎಸ್.ಮಹಾಬಲೇಶ್ವರ್ ಹೇಳಿದರು. ರಂಜಾನ್ ಹಿನ್ನೆಲೆಯಲ್ಲಿ ತಾಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಲ್ಲ ಮಸೀದಿಗಳ ಮೌಲ್ವಿಗಳು ಹಾಗೂ ಮುಸ್ಲಿಂ ಮುಖಂಡರ ಸಭೆಯಲ್ಲಿ ಮಾತನಾಡಿದರು. ಕರೊನಾ ಹಿನ್ನೆಲೆಯಲ್ಲಿ ಮನೆಗಳಲ್ಲಿಯೇ ಪ್ರಾರ್ಥನೆ ಮಾಡುವ ಮೂಲಕ ಹಬ್ಬ ಆಚರಣೆ ಮಾಡಬೇಕು. ಮಸೀದಿಗಳಲ್ಲಿ ಕೇವಲ ಮೂವರಿಗೆ ಮಾತ್ರ ಪ್ರಾರ್ಥನೆ ಮಾಡಲು ಅವಕಾಶವಿದ್ದು, ಕಡಿಮೆ ಧ್ವನಿವರ್ಧಕ ಬಳಸಿ ಪ್ರಾರ್ಥನೆ ಮಾಡಬೇಕು. ಇಪ್ತಿಯಾರ್ ಕೂಟಗಳನ್ನು ಆಯೋಜಿಸಬಾರದು ಎಂದು ತಿಳಿಸಿದರು.

ಡಿವೈಎಸ್ಪಿ ಎಂ.ಸಿ.ಶಿವಕುಮಾರ ಮಾತನಾಡಿ, ಈ ಭಾಗದಲ್ಲಿ ಮುಸ್ಲಿಮರು ಸ್ನೇಹ ಸೌರ್ಹಾದದಿಂದ ಜೀವನ ನಡೆಸುತ್ತಿರುವುದು ಸಂತೋಷದ ವಿಷಯ. ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಸರ್ಕಾರ ಕೆಲ ಕಟ್ಟು ನಿಟ್ಟಿನ ಕ್ರಮಗಳನ್ನು ರೂಪಿಸಿದ್ದು, ಅದರಂತೆ ಮುಸ್ಲಿಮರು ರಂಜಾನ್ ಆಚರಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯುವಕರಿಗೆ ತಿಳಿಹೇಳಬೇಕು ಎಂದರು. ಸಿಪಿಐ ಪಂಪನಗೌಡ, ಪಪಂ ಮುಖ್ಯಾಧಿಕಾರಿ ಸಿ.ಫಕೃದ್ದೀನ್ ಸಾಬ್, ಮೌಲ್ವಿಗಳಾದ ಅನ್ವರ್ ಬಾಷಾ, ನಿಜಾಮುದ್ದೀನ್, ಸಮೀವುಲ್ಲಾ, ಅಖಿಲ್ ಅಹ್ಮದ್, ಇಬಾದುಲ್ಲಾ, ಮುಖಂಡರಾದ ಬಾಷಾ ಸಾಬ್, ಸೈಯದ್ ಶುಕುರ್, ಮಾದೇಹಳ್ಳಿ ನಜೀರ್, ಜಿಲಾನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net