

ಚಿಕ್ಕಬಳ್ಳಾಪುರ: ಸಾಮಾಜಿಕ ಸೇವಾ ಚಟುವಟಿಕೆಯ ಸಹಭಾಗಿತ್ವದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿ ಅಧ್ಯಕ್ಷ ಕೆ.ವಿ.ನವೀನ್ ಕಿರಣ್ ಸಂತಸ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ನಗರದ ಸಿವಿವಿ ಕ್ಯಾಂಪಸ್ನಲ್ಲಿ ಕೈಗೊಂಡಿದ್ದ ಶಿಕ್ಷಣ ದತ್ತಿ ದಿನಾಚರಣೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪ್ರತಿ ವರ್ಷ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳೊಂದಿಗೆ ದತ್ತಿ ದಿನಾಚರಣೆಯನ್ನು ಕೈಗೊಳ್ಳುತ್ತ ಬರಲಾಗುತ್ತಿದೆ. ಇದರಲ್ಲಿ ವಿವಿಧ ಸಂ ಸಂಸ್ಥೆಗಳು ಭಾಗವಹಿಸಿ, ಸಂಭ್ರಮವನ್ನು ಹೆಚ್ಚಿಸುತ್ತಿವೆ ಎಂದು ತಿಳಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಸಮಾಜಕ್ಕೆ ಪ್ರತಿಯೊಬ್ಬರು ಸಹ ವಿಶಿಷ್ಟವಾದ ಕೊಡುಗೆಯನ್ನು ನೀಡುವ ಮೂಲಕ ಋಣವನ್ನು ತೀರಿಸಲು ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ನಗರಸಭಾ ಸದಸ್ಯೆ ನಿರ್ಮಲ ಪ್ರಭು, ಮತ್ತಿತರರು ಇದ್ದರು.
*ಬುಕ್ ಆಪ್ ರೆಕಾರ್ಡ್
ದತ್ತಿ ದಿನಾಚರಣೆ ಅಂಗವಾಗಿ ಕೈಗೊಂಡಿದ್ದ ರಕ್ತದಾನ ಶಿಬಿರದಲ್ಲಿ ಒಂದೇ ದಿನ ಬರೋಬ್ಬರಿ 2148 ಯುನಿಟ್ ರಕ್ತವನ್ನು ಸಂಗ್ರಹಿಸಿ, ದಾಖಲೆ ಬರೆದ ಕೆ.ವಿ.ಶಿಕ್ಷಣ ದತ್ತಿಗೆ ಕರ್ನಾಟಕ ಬುಕ್ ಆಪ್ ರೆಕಾರ್ಡ್ ಪ್ರಶಸ್ತಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಅಧ್ಯಕ್ಷ ಪ್ರೊ ಕೋಡಿರಂಗಪ್ಪ, ಕಾರ್ಯದರ್ಶಿ ರವಿ, ಖಜಾಂಚಿ ಎಂ.ಜಯರಾಮ್ ಮತ್ತಿತರರು ಇದ್ದರು.
*ಸಾಧಕರಿಗೆ ಸನ್ಮಾನ
ಸಿನಿಮಾ ಸಾಹಿತ್ಯ ರಚನೆಕಾರ ವರದರಾಜು, ಚಿಕ್ಕಬಳ್ಳಾಪುರ ನಗರ ಠಾಣೆ ಪಿಎಸ್ಐ ನಂಜುಂಡಯ್ಯ ಸೇರಿದಂತೆ ಸಾಧಕರನ್ನು ಸನ್ಮಾನಿಸಲಾಯಿತು. ಕ್ರೀಡೆ, ಸಾಂಸತಿಕ ಚಟುವಟಿಕೆಯಲ್ಲಿ ಭಾಗವಹಿಸಿದ್ದ ವಿಜೇತರಿಗೆ ಬಹುಮಾನ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
*ವಿವಿಧ ಚಟುವಟಿಕೆಯ ದಿನಾಚರಣೆ
ಮಾಜಿ ಶಾಸಕ ಸಿ.ವಿ.ವೆಂಕಟರಾಯಪ್ಪ ಜಯಂತಿ ಮತ್ತು ದತ್ತಿ ದಿನಾಚರಣೆ ಅಂಗವಾಗಿ ಶಿಕ್ಷಣ ಸಂಸ್ಥೆಯ ನೌಕರರು, ಪತ್ರಕರ್ತರಿಗೆ ಕ್ರೀಡಾಕೂಟ, ರಕ್ತದಾನ ಶಿಬಿರ, ಸಾಂಸತಿಕ ಕಾರ್ಯಕ್ರಮಗಳು, ಆಸ್ಪತ್ರೆಯ ಒಳ ರೋಗಿಗಳಿಗೆ ಬ್ರೆಡ್, ಹಣ್ಣು, ವಸತಿ ನಿಲಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆಯ ವಿವಿಧ ಚಟುವಟಿಕೆಯೊಂದಿಗೆ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು.