ಧಾರ್ಮಿಕ ಪ್ರವಚನದಿಂದ ಮನಸ್ಸಿಗೆ ಶಾಂತಿ: ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಅಭಿಮತ

16
Published on

ಮೈಸೂರು: ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವಂತೆ ಮಾಡುವ ಧಾರ್ಮಿಕ ಪ್ರವಚನ, ನೀತಿಕತೆಗಳನ್ನು ಕೇಳುವವರ ಸಂಖ್ಯೆ ಕಡಿಮೆ ಅಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ವಿಷಾದಿಸಿದರು.
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಆರಂಭಗೊಂಡ ಶ್ರಾವಣ ಮಾಸದ ಪೂಜಾನುಷ್ಠಾನ ಮತ್ತು ಪ್ರವಚನ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಜೀವನ ಎನ್ನುವುದು ವೇಗವಾಗಿ ಸಾಗುತ್ತಿದೆ. ಇದರಿಂದ ಬದುಕಿನಿಂದ ಶಾಂತಿ-ನೆಮ್ಮದಿ ಕಡಿಮೆಯಾಗುತ್ತಿದೆ. ಆದ್ದರಿಂದ ಇಂತಹ ಧಾರ್ಮಿಕ ಪ್ರವಚನಗಳಲ್ಲಿ ಭಾಗವಹಿಸಿ, ಮನಸ್ಸನ್ನು ಪ್ರಫುಲತೆಯಿಂದ ಇಟ್ಟುಕೊಳ್ಳವ ಅವಶ್ಯಕತೆ ಹೆಚ್ಚಾಗಿದೆ ಎಂದರು.
ಹಿಂದೆ ಇಂತಹ ಪ್ರವಚನ, ನೀತಿಕತೆಗಳನ್ನು ಹೇಳುವ ಕಾರ್ಯಕ್ರಮಗಳು ಹೆಚ್ಚಾಗಿತ್ತು. ಆದರೆ ಇತ್ತೀಚೆಗೆ ಕೇಳುವವರ ಸಂಖ್ಯೆ ಕ್ಷೀಣಿಸುತ್ತಿದೆ. ಧಾರ್ಮಿಕ ಪ್ರಚನಗಳನ್ನು ಆಲಿಸುವುದರಿಂದ ಮನಸ್ಸಿಗೆ ಶಾಂತಿ-ನೆಮ್ಮದಿ ದೊರಕುತ್ತದೆ. ಜತೆಗೆ ಜ್ಞಾನ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಶ್ರಾವಣಮಾಸದ ಪ್ರವಚನ ಕಾರ್ಯಕ್ರಮಗಳಲ್ಲಿ ಕೆಲವು ಗಂಟೆಗಳಾದರೂ ಕುಳಿತಾಗ ನಮ್ಮ ಜೀವನದ ಕ್ರಮವನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬಹುದು. ಭವಿಷ್ಯದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಅರಿತುಕೊಳ್ಳಲು ಇದು ಒಳ್ಳೆಯ ಅವಕಾಶವಾಗಿದೆ. ತಿಂಗಳ ಪೂರ್ತಿ ಪ್ರವಚನಗಳನ್ನು ಆಲಿಸಿದಾಗ ಜೀವನ ದಿಕ್ಕು ಕೂಡ ಬದಲಾಗಬಹುದು ಎಂದರು.
ಲಕ್ಕಣ ದಂಡೇಶನ ವಿರಚಿತ ‘ಶಿವತತ್ವ ಚಿಂತಾಮಣಿ’ಯನ್ನು ಪ್ರವಚನ ಮಾಡಿದ ಡಾ.ಕೆ. ಅನಂತರಾಮು, ಶ್ರಾವಣ ಮಾಸದಲ್ಲಿ ಪ್ರವಚನಗಳನ್ನು ಶ್ರವಣ ಮಾಡುವುದರಿಂದ ಒಳ್ಳೆಯದಾಗುತ್ತದೆ. ಈ ಮಾಸದಲ್ಲಿ ಬೀಸುವ ಗಾಳಿಯು ಹಿತಕರ ವಾತಾವರಣವನ್ನು ಉಂಟುಮಾಡುವುದರಿಂದ ಸಂಜೆಯ ಸಮಯ ಪ್ರವಚನವನ್ನು ಆಲಿಸಲು ಸಮಯವೂ ಪ್ರಸಕ್ತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಹಳ ಹಿಂದಿನ ಕಾಲದಿಂದಲೂ ಪ್ರವಚನ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ ಎಂದು ವಿವರಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಹರವೆ ವಿರಕ್ತ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಸಂದೇಶ ನೀಡಿದರು. ನಗರ ಪೊಲೀಸ್ ಅಯುಕ್ತೆ ಸೀಮಾ ಲಾಟ್ಕರ್ ಅಧ್ಯಕ್ಷತೆ ವಹಿಸಿದ್ದರು. ಮುಡಾ ಆಯುಕ್ತ ಎ.ಎನ್.ರಘುನಂದನ್ ಇದ್ದರು.
ಕಾರ್ಯಕ್ರಮದಲ್ಲಿ ವಿದುಷಿ ಎಂ.ವಿ.ಶುಭಾ ರಾಘವೇಂದ್ರ ವಾಚನ ಮಾಡಿದರೆ, ಡಾ.ಕೆ. ಅನಂತರಾಮು ವ್ಯಾಖ್ಯಾನಿಸಿದರು. ಜೆಎಸ್‌ಎಸ್ ಲಲಿತಕಲಾ ವೃಂದದ ಸದಸ್ಯರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net