

ಆಲೂರು: ದೇವಸ್ಥಾನ, ಮಠ-ಮಂದಿರಗಳು ಮನುಷ್ಯನ ಬದುಕಿಗೆ ನೆಮ್ಮದಿ ನೀಡುವ ತಾಣವಾಗಿದ್ದು, ಬದುಕಿನ ಜಂಜಾಟದಿಂದ ನೆಮ್ಮದಿ ಪಡೆಯಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.
ತಾಲೂಕಿನ ಪಾಳ್ಯ ಹೋಬಳಿ ಚಿಕ್ಕಕಣಗಾಲು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಕಾಳೇಶ್ವರಸ್ವಾಮಿ ಮತ್ತು ಶ್ರೀ ಮಾಸ್ತಮ್ಮ ದೇವಿ ದೇವಾಲಯ ಉದ್ಘಾಟನೆ ಮತ್ತು 48ದಿನಗಳ ಪೂಜಾ ಕಾರ್ಯಕ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಸನಾತನ ಧರ್ಮದ ಹಾದಿ ಯಾವುದೆಂದು ತಿಳಿದಿಲ್ಲ. ಇಷ್ಟೇ ವರ್ಷಗಳ ಹಿಂದೆ ಸನಾತನ ಧರ್ಮ ಉದಯವಾಯಿತು ಎಂದು ಹೇಳಲು ಸಾಧ್ಯವಿಲ್ಲ. ಹಲವು ಧರ್ಮಗಳ ಕಾಲಮಾನಗಳು ಪುರಾವೆಗಳಲ್ಲಿ ದೊರೆತಿವೆ. ಆದರೆ ಸನಾತನ ಧರ್ಮ ಹಾದಿಯೂ ಇಲ್ಲದ ಅಂತ್ಯವೂ ಇಲ್ಲದ ಶ್ರೇಷ್ಠ ಧರ್ಮ. ಶತಶತಮಾನಗಳಿಂದ ಹಲವು ದಾಳಿಗಳನ್ನು ಎದುರಿಸಿಯೂ ಸನಾತನ ಧರ್ಮ ಗಟ್ಟಿಯಾಗಿ ಬೇರೂರಿದೆ ಎಂದರೆ ಧರ್ಮಕ್ಕೆ ಇರುವ ಶಕ್ತಿಯನ್ನು ತೋರಿಸುತ್ತದೆ. ಚಿಕ್ಕಣಗಾಲು ಗ್ರಾಮದಲ್ಲಿ ಗ್ರಾಮಸ್ಥರ ಸಹಕಾರದಿಂದ ನಿರ್ಮಾಣಗೊಂಡಿರುವ ಕಾಳೇಶ್ವರ ಸ್ವಾಮಿ ದೇವಾಸ್ಥಾನ ಸುಂದರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ತಾಳೂರು ಗ್ರಾಮ ಪಂಚಾಯಿತಿ ಸದಸ್ಯ ಅಣ್ಣಪ್ಪ, ಮಾಜಿ ಸದಸ್ಯ ದಿನೇಶ್, ಹಾಲಿನ ಡೇರಿ ನಿರ್ದೇಶಕ ಸಣಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಅಜಿತ್, ದೇವಾಲಯ ಅರ್ಚಕ ಪ್ರದೀಪ್, ಸಮಿತಿ ಸದಸ್ಯರಾದ ಸ್ವಾಮಿ, ಚಂದ್ರಣಿ, ಚಂದ್ರು, ರಾಜಯ್ಯ, ಚಂದ್ರ ಹಾಜರಿದ್ದರು.