ದೇವರ ಪ್ರಾರ್ಥನೆಯಿಂದ ಮನಸಿನ ಸ್ಥಿರತೆ ಸಾಧ್ಯ

SWARNAVALLI SHREE
Published on

ಶಿರಸಿ: ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದು ಬಹಳ ಮುಖ್ಯವಾದದ್ದು. ಇದರಿಂದ ಮನಸಿನ ಸ್ಥಿರತೆ ಸಾಧ್ಯವಿದೆ ಎಂದು ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ತಮ್ಮ 34ನೇ ಹಾಗೂ ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮಿಗಳವರ ಪ್ರಥಮ ಚಾತುರ್ವಸ್ಯದ ಸಂದರ್ಭದಲ್ಲಿ ಮಠದ ಶಿಷ್ಯರಾದ ಶಿರಸಿ ಸೀಮೆಯ ತೆರಕನಹಳ್ಳಿ ಹಾಗೂ ತುಂಡುಗ್ರಾಮ ಭಾಗಿಯ ಸಮಸ್ತ ಶಿಷ್ಯ ಭಕ್ತರು ಮಂಗಳವಾರ ತಮ್ಮ ಸೇವೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಪ್ರಾರ್ಥನೆಯನ್ನು ದೀರ್ಘಕಾಲದವರೆಗೆ ಮಾಡಬೇಕು. ಭಗವಂತನು ನಾವು ಕೇಳಿದ್ದನ್ನು ಕೊಡಲು ದೀರ್ಘ ಕಾಲದ ಪ್ರಾರ್ಥನೆ ಅಗತ್ಯ. ಹಿರಿಯರು ಹೇಳಿದ ಹಾಗೆ ಕಾಲ ಬರಬೇಕು ಎನ್ನುವ ಹಾಗೆ ಎಲ್ಲದಕ್ಕೂ ಕಾಲ ಬರಬೇಕು. ದೇವರಲ್ಲಿ ಪ್ರಾರ್ಥನೆಯೂ ಕೂಡ ಹಾಗೆ. ದೇವರಿಗೆ ಭಕ್ತನ ಪ್ರಾರ್ಥನೆಯನ್ನು ಈಡೇರಿಸಬೇಕು ಎಂಬ ಮನಸು ಬರಬೇಕು ಎಂದು ಪ್ರಾರ್ಥನೆಯ ಮಹತ್ವದ ಕುರಿತು ತಿಳಿಸಿದರು.

ಪ್ರಾರ್ಥನೆಯ ಮರ್ಮವನ್ನು ನಾವು ಅರಿತುಕೊಂಡರೆ ಪ್ರಾರ್ಥನೆಯನ್ನು ಯಾಕೆ ಮಾಡಬೇಕು ಎಂಬುದು ತಿಳಿಯುತ್ತದೆ. ನಮ್ಮ ಮನಸನ್ನು ಸ್ಥಿರವಾಗಿ ಇಟ್ಟುಕೊಳ್ಳದೇ ಪ್ರಾರ್ಥನೆ ಮಾಡಿದರೆ ಆ ಪ್ರಾರ್ಥನೆ ಫಲಿಸುವುದಿಲ್ಲ. ನಮ್ಮ ಮನಸು ದೇವರಲ್ಲಿ ಸ್ಥಿರವಾಗಿರದೇ ಬೇರೆಲ್ಲೋ ಇರುತ್ತದೆ. ಕೆಲವೊಮ್ಮೆ ದೇವರಲ್ಲಿ ಸಂಶಯದ ಭಾವಗಳು ಬರುತ್ತಿರುತ್ತವೆ. ಈ ರೀತಿಯಾದ ಪ್ರಾರ್ಥನೆಯನ್ನು ದೇವರು ಸ್ವೀಕರಿಸುವುದಿಲ್ಲ ಎಂದರು.

ಭಗವಂತನ ಸಾಮ್ರಾಜ್ಯದಲ್ಲಿ ವಿಶಿಷ್ಟವಾದ ಒಂದು ನಿಯಮವಿದೆ. ಯಾವನು ಮನಸು ಕೊಟ್ಟು ಮಾಡುತ್ತಾನೋ ಅವನ ಪ್ರಾರ್ಥನೆ ಬೇಗ ಹೋಗಿ ತಲುಪುತ್ತದೆ. ಮನಸನ್ನು ಸ್ವಲ್ಪ ಕಡಿಮೆ ಕೊಟ್ಟರೆ ಸ್ವಲ್ಪ ತಡವಾಗಿ ತಲುಪುತ್ತದೆ. ಮನಸನ್ನು ಕೊಡದೇ ಇದ್ದರೆ ತಲುಪುವುದೇ ಇಲ್ಲ. ಭಕ್ತಿ- ಶ್ರದ್ಧೆ ಬರಬೇಕು ಹಾಗೂ ನಿಶ್ಚಲತೆ ಬರಬೇಕು ಎಂದರೆ ದೀರ್ಘ ಕಾಲದ ಪ್ರಾರ್ಥನೆ ಅಗತ್ಯ ಎಂದರು.

ನಮ್ಮದೇ ಆದ ಪ್ರಾರಬ್ಧ ಕರ್ಮಗಳನ್ನು ದಾಟಲು ದೀರ್ಘಕಾಲದ ಪ್ರಾರ್ಥನೆ ಅಗತ್ಯ. ಸರಿಯಾದ ಪ್ರಾರ್ಥನೆಯನ್ನು ದೇವರಲ್ಲಿ ಸಲ್ಲಿಸಬೇಕು. ಧರ್ಮಕ್ಕೆ ವಿರುದ್ಧವಾದ, ಅಗ್ರಹದಿಂದ ಕೂಡಿದ್ದು, ಕಾಮ - ಕ್ರೋಧ - ಲೋಭ - ಮೋಹ - ಮದ - ಮಾತ್ಸರ್ಯ ಎಂಬ ಅರಿಷಡ್ವೈರಿಗಳಿಂದ ಕೂಡಿದ್ದು ಇಂತಹ ಪ್ರಾರ್ಥನೆಯನ್ನು ದೇವರಲ್ಲಿ ಸಲ್ಲಿಸಿದರೆ ಅದು ಭಗವಂತನ ಕಡೆಯಿಂದ ನೆರವೇರುವುದಿಲ್ಲ ಎಂದರು.

ಸೀಮೆಯ ಮಾತೆಯರು ಮತ್ತು ಮಹನೀಯರು ಶ್ರೀಮಠಕ್ಕೆ ಆಗಮಿಸಿ ಭಕ್ತಿಯಿಂದ ತಮ್ಮ ಸೇವೆಯನ್ನು ಸಲ್ಲಿಸಿದರು. ಬೆಳಗ್ಗೆಯಿಂದ ಮಾತೆಯರು ಶಂಕರ ಸ್ತೋತ್ರ ಪಠಣ, ಭಗವದ್ಗೀತಾ ಪಠಣ ಹಾಗೂ ಲಲಿತಾ ಸಹಸ್ರನಾಮದಿಂದ ಅರ್ಚನೆ ಮಾಡಿದರು. ಮಹನೀಯರು ಗಾಯತ್ರೀ ಅನುಷ್ಠಾನ ಕೈಗೊಂಡರು. ಸೀಮೆಯ ಪ್ರಮುಖರು ಗಣಪತಿ ಹೆಗಡೆ ಹೊಸಬಾಳೆ, ಗೋಪಾಲಕೃಷ್ಣ ಹೆಗಡೆ ಮೆಣಸಿಕೇರಿ ಇದ್ದರು. ಆರ್.ಎಸ್. ಹೆಗಡೆ ಬೈರುಂಭೆ ನಿರ್ವಹಿಸಿದರು. ಈ ವೇಳೆ ಭಕ್ತರಿಗೆ ಶ್ರೀಗಳು ವೃಕ್ಷ ಮಂತ್ರಾಕ್ಷತೆ ನೀಡಿದರು.

ಅತ್ಯಂತ ಶ್ರದ್ಧೆಯಿಂದ ದೇವರಲ್ಲಿ ಪ್ರಾರ್ಥನೆ ಮಾಡಿದರೆ ಮನಸಿನ ಭಾರ ಕಮ್ಮಿ ಆಗುತ್ತದೆ. ಮನಸ್ಸು ನಿರಾಳವಾಗುತ್ತದೆ. | ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net