ಪ್ರವಾಸಿ ತಾಣ ವೀಕ್ಷಣೆಯಿಂದ ನೆಮ್ಮದಿ

Published on

ಬಳ್ಳಾರಿ : ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಜತೆಗೆ ಪ್ರವಾಸಿ ತಾಣಗಳನ್ನು ವೀಕ್ಷಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.

ಇಲ್ಲಿನ ಐತಿಹಾಸಿಕ ಕೋಟೆ ಮುಂಭಾಗದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘ, ರಾಬರ್ಟ ಬ್ರೂಸ್‌ಫೂಟ್ ಸಂಗನಕಲ್ಲು ಪುರಾತತ್ವ ವಸ್ತು ಸಂಗ್ರಹಾಲಯ ಮತ್ತು ಸಂಡೂರು ಡೈರೀಸ್ ಸಹಯೋಗದೊಂದಿಗೆ ಪ್ರವಾಸೋದ್ಯಮ ಹಾಗೂ ಸುಸ್ಥಿರ ಪರಿವರ್ತನೆ ಎಂಬ ಸಂದೇಶದಡಿಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಉಪನ್ಯಾಸಕರು ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿ ನೀಡಿದರೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡುತ್ತದೆ. ಸುತ್ತಮುತ್ತಲಿನ ಐತಿಹಾಸಿಕ ಸ್ಥಳಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಿಲ್ಲೆಯ ಜನರು ಈ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕು ಎಂದರು.

ಇಂದಿನ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ದುಶ್ಚಟಕ್ಕೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು.

ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದ ಸದಸ್ಯ ಅಹಿರಾಜ್. ಎಂ ಮಾತನಾಡಿ, ಐದು ಸಾವಿರ ವರ್ಷಗಳ ಇತಿಹಾಸ ಹೊಂದಿದ ಸಂಗನಕಲ್ಲು ಗುಡ್ಡ ಪ್ರದೇಶವು ನವಶಿಲಾಯುಗದ ಕುರುಹುಗಳ ತಾಣವಾಗಿದೆ. ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಜನವಸತಿ ಪ್ರದೇಶವಾಗಿತ್ತು ಎಂಬ ಇತಿಹಾಸವನ್ನು ಹೊಂದಿದೆ. ಇಂತಹ ಐತಿಹಾಸಿಕ, ನೈಸರ್ಗಿಕ ತಾಣಗಳ ವೀಕ್ಷಣೆಯಿಂದ ಇತಿಹಾಸದ ಕುರಿತು ಕುತೂಹಲ ಸೃಷ್ಟಿಯಾಗಿ ಜ್ಞಾನ ವೃದ್ಧಿಯಾಗಲಿದೆ ಎಂದು ಹೇಳಿದರು.

ಬಳಿಕ ಪ್ರವಾಸಿ ಮಿತ್ರ ರಕ್ಷಣಾ ಸಿಬ್ಬಂದಿಗೆ ಪ್ರಶಂಸೆ ಪತ್ರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಗಣ್ಯರಿಗೆ ನೆನಪಿನ ಕಾಣಿಕೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net