

ಹೊಳೆಹೊನ್ನೂರು: ಹೊಸಜಂಬರಘಟ್ಟೆಯಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ಕೋಮು ಗಲಾಟೆಗೆ ಸಂಬಂಧಿಸಿದಂತೆ ಎರಡೂ ಕೋಮಿನ ಮುಖಂಡರು ರಾಜಿ ಪಂಚಾಯಿತಿಗೆ ಒಪ್ಪಿಗೆ ಸೂಚಿಸಿದ್ದಾರೆ. ಜತೆಗೆ ಫೆ.10ರಂದು ಹೊಸಜಂಬರಘಟ್ಟೆ ಗ್ರಾಮದಲ್ಲಿ ಎರಡು ಕೋಮುಗಳು ಸೇರಿದಂತೆ ಎಲ್ಲ ಸಮುದಾಯಗಳ ಮುಖಂಡರು ಮತ್ತು ಗ್ರಾಮಸ್ಥರನ್ನೊಳಗೊಂಡ ಶಾಂತಿ ಸಭೆಯೊಂದನ್ನು ನಡೆಸಲು ತಿರ್ಮಾನಿಸಿದ್ದಾರೆ.
ಗಲಾಟೆ ಸಂಬಂಧ ಗುರುವಾರ ಹೊಳೆಹೊನ್ನೂರು ಠಾಣೆಯಲ್ಲಿ ಸಿಪಿಐ ಲಕ್ಷ್ಮೀಪತಿ ಅವರನ್ನು ಭೇಟಿ ಮಾಡಿ ಎರಡೂ ಕೋಮಿನ ಮುಖಂಡರು ವಿಸ್ತೃತವಾಗಿ ಮಾತುಕತೆ ನಡೆಸಿದರು. ಈ ವೇಳೆ ಇನ್ನು ಮುಂದೆ ಗ್ರಾಮದಲ್ಲಿ ಅಶಾಂತಿ ನೆಲೆಸಲು ಬಿಡುವುದಿಲ್ಲ. ಮರದ ಕೊಂಬೆ ಕಡಿದ ವಿಚಾರದಲ್ಲಿ ಎಲ್ಲವನ್ನೂ ಸರಿಪಡಿಸಿದ ಬಳಿಕವೂ ಪರಿಸ್ಥಿತಿ ಕೈಮೀರಿದ್ದು ಹೇಗೆಂದು ಗೊತ್ತಾಗುತ್ತಿಲ್ಲ. ಗ್ರಾಮದ ಶಾಂತಿಗೆ ಭಂಗ ತರುವ ವ್ಯಕ್ತಿಗಳನ್ನು ಕ್ಷಮಿಸುವ ಮಾತಿಲ್ಲ ಎಂದು ಭರವಸೆ ನೀಡಿದರು. ಜತೆಗೆ ಗಲಾಟೆಗೆ ಪ್ರಚೋದನೆ ನೀಡಿದವರ ವಿರುದ್ಧವೂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.
ಹೊಸಜಂಬರಘಟ್ಟೆ ಗ್ರಾಮದಲ್ಲಿ ಮೊದಲಿನಿಂದಲೂ ಎಲ್ಲ ಕೋಮಿನವರು ಒಂದೇ ಕುಟುಂಬದವರಂತೆ ರೈತಾಪಿ ಕಾರ್ಯಗಳಲ್ಲಿ ತೊಡಗುತ್ತಿದ್ದರು. ಕೆಲದಿನಗಳಿಂದ ಗ್ರಾಮದ ಶಾಂತಿಗೆ ಭಂಗ ಉಂಟಾಗುತ್ತಿದೆ. ನಾವೆಲ್ಲ ಸೇರಿಕೊಂಡು ಹೊಸಜಂಬರಘಟ್ಟೆ ಗ್ರಾಮದಲ್ಲಿ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆಯೊಂದನ್ನು ಆಯೋಜಿಸಿ ಎಲ್ಲರೂ ಹೊಂದಾಣಿಕೆಯಿಂದ ಹೋಗುವ ತೀರ್ಮಾನಕ್ಕೆ ಬರುತ್ತೇವೆ ಎಂದು ಹೇಳಿದರು.
ಇಲ್ಲಿಗೆ ನಮ್ಮೂರಲ್ಲಿ ಎಲ್ಲವೂ ಸರಿ ಹೋಗಬೇಕು. ಹೊಸಜಂಬರಘಟ್ಟೆಯಲ್ಲಿ ಮೊದಲಿನ ರೀತಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಗುರಿ. ನಮ್ಮೂರಲ್ಲಿ ಇನ್ನೂ ಮುಂದೆ ಪರಸ್ಪರ ಹೊಡೆದಾಟ ಮಾಡಿಕೊಳ್ಳುವುದಿಲ್ಲ. ಯಾವುದೇ ಗಲಾಟೆಗಳಾದರೂ ನೇರವಾಗಿ ಠಾಣೆಗೆ ಬಂದು ದೂರು ನೀಡುತ್ತೇವೆ. ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಶಾಂತಿಯುತವಾಗಿ ಎಲ್ಲ ಸಮುದಾಯದವರು ಅನ್ಯೋನ್ಯವಾಗಿ ಹೊಂದಿಕೊಂಡು ಹೋಗುವುದಾಗಿ ಒಪ್ಪಿಕೊಂಡು ಎರಡು ಕೋಮಿನವರು ರಾಜಿ ಪಂಚಾಯಿಗೆ ಒಪ್ಪಿಗೆ ಸೂಚಿಸಿದರು.
ಸಿಪಿಐ ಲಕ್ಷ್ಮೀಪತಿ, ಮುಖಂಡರಾದ ನಾಗರಾಜ್, ಕೃಷ್ಣಪ್ಪ,ರಮೇಶ, ರಾಜಪ್ಪ, ಸಮೀಉಲ್ಲಾ, ಅಮೀರ್, ನಜೀರ್, ಮುನೀರ್, ನಸ್ರುಲ್ಲಾ ಇತರರಿದ್ದರು.