

ಗುಂಡ್ಲುಪೇಟೆ: ರಂಜಾನ್ ಮರುದಿನ ಪಟ್ಟಣದ ಜಾಕೀರ್ ಹುಸೇನ್ ನಗರದಲ್ಲಿ ನಡೆದಿದ್ದ ತ್ರಿವಳಿ ಕೊಲೆ ಪ್ರಕರಣ ಸಂಬಂಧ ದಕ್ಷಿಣವಲಯ ಐಜಿ ವಿಪುಲ್ ಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಎರಡೂ ಗುಂಪುಗಳ ನಡುವೆ ಶಾಂತಿಸಭೆ ನಡೆಸಲಾಯಿತು.
ಪಟ್ಟಣದ ಅತಿಗಣ್ಯರ ಅತಿಥಿಗೃಹದಲ್ಲಿ ಸಭೆ ನಡೆಸಲಾಯಿತು. ಮುಖಂಡರಿಂದ ಪಟ್ಟಣದ ಕೆಲವು ಚಟುವಟಿಕೆ ಬಗ್ಗೆ ಮಾಹಿತಿ ಪಡೆದ ವಿಪುಲ್‌ಕುಮಾರ್ ಮಾತನಾಡಿ, ತಾಲೂಕಿನ ಇತಿಹಾಸದಲ್ಲಿ ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಘಟನೆ ಸಂಭವಿಸಿದೆ. ಮುಂದೆ ಈ ರೀತಿ ಅಹಿತಕರ ಘಟನೆ ಮರುಕಳಿಸಬಾರದು. ಯಾವುದೇ ದ್ವೇಷ ಸಾಧಿಸಲು ಅವಕಾಶ ನೀಡಬಾರದು. ಪಟ್ಟಣದಲ್ಲಿ ಶಾಂತಿ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಮುಖಂಡರಿಗೆ ಸೂಚಿಸಿದರು.
ಯಾವುದೇ ಘಟನೆ ಏಕಾಏಕಿ ಸಂಭವಿಸುವುದಿಲ್ಲ. ಹಿಂದಿನಿಂದಲೂ ಎರಡು ಗುಂಪುಗಳ ನಡುವೆ ಇರುವ ವೈಷಮ್ಯ ಹಾಗೂ ಸಾಮರಸ್ಯದ ಕೊರತೆ ಇಲ್ಲಿ ಎದ್ದು ಕಾಣುತ್ತದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಭಾರಿ ಅನಾಹುತ ತಪ್ಪಿಸಿದ್ದಾರೆ. ಮೂರು ತಂಡಗಳನ್ನು ರಚಿಸಿ ಉನ್ನತ ಮಟ್ಟದ ತನಿಖೆ ನಡೆಸಿ ಈಗಾಗಲೇ 15 ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನೂ ಮೂವರ ಪತ್ತೆಗೆ ಕ್ರಮಕೈಗೊಳ್ಳಲಾಗಿದೆ. ಪಟ್ಟಣದಲ್ಲಿ ಇನ್ನೂ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದ್ದು ನಾಗರಿಕರು ಯಾವುದೇ ಅತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದರು.
ಎಸ್‌ಪಿ ಆನಂದಕುಮಾರ್, ಎಎಸ್‌ಪಿ ಅನಿತಾ ಹದ್ದಣ್ಣನವರ್, ಡಿವೈಎಸ್‌ಪಿ ಮೋಹನ್ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.