

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶನಿವಾರ ಕರೆದಿರುವ ಶಾಂತಿ ಸಭೆಗೆ ಮುಸ್ಲಿಂ ಸಮುದಾಯದ ಮುಖಂಡರು ಬಹಿಷ್ಕಾರ ಹಾಕಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 11 ಗಂಟೆಗೆ ಎಲ್ಲ ಸಮುದಾಯದ ಮುಖಂಡರಿಗೆ ಮತ್ತು ಸಂಘಸಂಸ್ಥೆಗಳ ನಾಯಕರ ಜೊತೆ ಶಾಂತಿ ಸಭೆಗೆ ಆಹ್ವಾನ ನೀಡಲಾಗಿತ್ತು. ಆದರೆ ಮುಖ್ಯಮಂತ್ರಿ ತಾರತಮ್ಯ ನೀತಿಯನ್ನು ಖಂಡಿಸಿ ಇಂದಿನ ಸಭೆಗೆ ಬಹಿಷ್ಕಾರ ಹಾಕಲಾಗಿದೆ.
ಮುಸ್ಲಿಂ ಸೆಂಟ್ರಲ್ ಕಮಿಟಿ,ಎಸ್‌ಕೆಎಸ್‌ಎಸ್‌ಎಫ್, ಪಿಎಫ್‌ಐ, ಜಮಾತೆ ಇಸ್ಲಾಮ್ ಸೇರಿ ಹಲವು ಮುಸ್ಲಿಂ ಸಂಘಟನೆಗಳು ಬಹಿಷ್ಕಾರ ಹಾಕಿವೆ.
ಜಿಲ್ಲಾಧಿಕಾರಿಗಳ ಮೇಲೆ ನಮಗೆ ಅಪಾರ ಗೌರವಿವೆ. ಆದರೆ ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದ ವೇಳೆ ತಾರತಮ್ಯ ನೀತಿ ತೋರಿದ್ದಾರೆ. ಜೊತೆಗೆ ಸೌಜನ್ಯಕ್ಕಾದರೂ ಮುಸ್ಲಿಂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಒಂದು ವೇಳೆ ವೇಳೆ ಸಿಎಂ ಭೇಟಿ ವೇಳೆ ಶಾಂತಿ ಸಭೆ ಕರೆದಿದ್ದರೆ ನಾವು ಪಾಲ್ಗೊಳ್ಳುತ್ತಿದ್ದೆವು ಎಂದು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ತಿಳಿಸಿದ್ದಾರೆ.
ಈ ಸಭೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವ, ಮಂಗಳೂರು ನಗರ ಪೊಲೀಸ್ ಕಮೀಷನರ್, ಜಿಲ್ಲಾ ಎಸ್ಪಿ, ಜಿ.ಪಂ. ಸಿಇಒ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಈ ಸಭೆಗೆ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದಾರೆ.