

ನಂಜನಗೂಡು: ಪಟ್ಟಣದಲ್ಲಿ ಜ.12ರಂದು ಆಯೋಜಿಸಿರುವ ಅಂದಾಕಾಸುರ ಸಂಹಾರ ಕುರಿತು ತಾಲೂಕು ಕಚೇರಿಯಲ್ಲಿ ಗುರುವಾರ ರಾತ್ರಿ ಶಾಂತಿ ಸಭೆ ಕರೆಯಲಾಗಿತ್ತು.
ನಂಜುಂಡೇಶ್ವರನ ಭಕ್ತರು ಹಾಗೂ ಅಂದಾಕಾಸುರ ಸಂಹಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಉಭಯ ತಂಡಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ಡಿವೈಎಸ್‌ಪಿ ರಘು ನೇತೃತ್ವ ವಹಿಸಿದ್ದರು.
ಕಳೆದ ವರ್ಷ ಅಂದಾಕಾಸುರ ಸಂಹಾರ ವೇಳೆ ಮಹಿಷಾಸುರನ ಚಿತ್ರ ಹೋಲುವ ಪಟ ಹಾಕಲಾಗಿದೆ ಎಂದು ಗಲಭೆ ಉಂಟಾಗಿ ನಂಜುಂಡೇಶ್ವರನ ವಿಗ್ರಹದ ಮೇಲೆ ನೀರು ಎರಚಿ ಅಪಮಾನಿಸಿ ಎಂದು ನಂಜನಗೂಡು ಉದ್ವಿಗ್ನಗೊಂಡಿತು. ಕಳೆದ ಬಾರಿಯಂತೆ ಈ ಬಾರಿ ಸಮಸ್ಯೆಯಾಗಬಾರದೆಂದು ಆಕ್ಷೇಪಾರ್ಹವಾದ ಅಂದಾಕಾಸುರನ ಚಿತ್ರ ಬದಲಿಸಲಾಯಿಸಿ ಶಿವ ಪುರಾಣದಲ್ಲಿ ಬರುವ ಅಂದಾಕಾಸುರನ ವರ್ಣನೆಗೆ ತಕ್ಕಹಾಗೆ ಚಿತ್ರ ಬರೆಸಿರುವುದನ್ನು ಪ್ರದರ್ಶಿಸಲಾಯಿತು.
ಈ ಸಂಬಂಧ ರಾಜ್ಯ ಆಗಮಶಾಸ್ತ್ರ ಪಂಡಿತರರೊಂದಿಗೆ ಚರ್ಚಿಸಿದ ಬಳಿಕ ನೂತನ ಚಿತ್ರ ಪಟವನ್ನು ತಹಸೀಲ್ದಾರ್ ಹಾಗೂ ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಜಗದೀಶ್ ಪ್ರದರ್ಶನ ಮಾಡಿದರು. ನೂತನ ಚಿತ್ರಕ್ಕೆ ಉಭಯ ತಂಡದ ಮುಖಂಡರು ಒಪ್ಪಿಗೆ ಸೂಚಿಸಿದರು.
ಸಮಸ್ಯೆ ಬಗೆಹರಿಯಿತು ಎನ್ನುವಷ್ಟರಲ್ಲಿ ದಲಿತ ಸಂಘರ್ಷ ಸಮಿತಿಯ ಮಲ್ಲಳ್ಳಿ ನಾರಾಯಣ್ ಮಾತನಾಡಿ, ಇದೊಂದು ಮಾನವೀಯತೆ ಇಲ್ಲದ ಆಚರಣೆ. ಇದು ನಿಲ್ಲಬೇಕು, ಈ ಆಚರಣೆ ನಿಲ್ಲಿಸಬೇಕೆಂದು ನಾವು ಸರ್ಕಾರಕ್ಕೆ ಪತ್ರ ಬರೆದ್ದಿದ್ದೇವೆ. ಈ ಸಂಬಂಧ ಕಾನೂನು ಹೋರಾಟ ಮಾಡುತ್ತಿದ್ದೇವೆ. ಕಾನೂನು ತಡೆ ಬರುವವರೆಗೂ ನಡೆಯಲಿ. ಆದರೆ ಅಂದಾಕಾಸುರನ ಚಿತ್ರವನ್ನು ಯಾರೂ ತುಳಿಯಬಾರದು ಹಾಗೂ ಚಿತ್ರವನ್ನು ಚಿಕ್ಕದಾಗಿ ಬರೆದುಕೊಂಡು ಆಚರಣೆ ಮಾಡಬೇಕು ಎಂದು ತಿಳಿಸಿದರು.
ನಾರಾಯಣ್ ಅವರ ಮಾತಿಗೆ ಅಸಮ್ಮತಿಸಿ, ಆಕ್ಷೇಪ ವ್ಯಕ್ತಪಡಿಸದ ನಂಜುಂಡೇಶ್ವರನ ಭಕ್ತರು, ಮಹಿಷಾಸುರನನ್ನು ಹೋಲುವ ಚಿತ್ರ ತೆಗೆಯುವುದು ಅವರ ಬೇಡಿಕೆಯಾಗಿತ್ತು. ಈಗ ಅದನ್ನು ದೇವಾಲಯದ ಆಡಳಿತ ಮಂಡಳಿ ಬದಲಿಸಿದೆ. ಆದರೆ ಈಗ ಅಂದಾಕಾಸುರನ ಚಿತ್ರವನ್ನು ತುಳಿಯಬಾರದು, ಚಿಕ್ಕದಾಗಿ ಚಿತ್ರ ಬರೆಯಬೇಕು, ಇಷ್ಟೇ ಇರಬೇಕು ಎಂಬ ಷರತ್ತು ಹಾಕುತ್ತಿರುವುದು ಸರಿಯಲ್ಲ. ಇವರ ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ. ಸರ್ಕಾರದ ಕೈಪಿಡಿಯಲ್ಲಿ ಇರುವಂತೆ ಪರಂಪರಾಗತವಾಗಿ ಏನು ನಡೆದುಕೊಂಡು ಬಂದಿದೇಯೋ ಅದೇ ನಡೆಯಬೇಕು. ಇದು ನಮ್ಮ ಧಾರ್ಮಿಕ ಆಚರಣೆ. ಅದನ್ನು ಹತ್ತಿಕ್ಕುವ ಹುನ್ನಾರ ನಡೆಯುತ್ತಿದೆ. ಈ ಕುರಿತು ನಂಜುಂಡೇಶ್ವರನ ಭಕ್ತರೆಲ್ಲರೂ ಸೇರಿ ಮುಂದೆ ಏನು ಮಾಡಬೇಕೆಂದು ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ದಸಂಸ ಸುರೇಶ್, ಮಲ್ಲೇಶ್, ಯಶವಂತ್, ಯುವಾ ಬ್ರಿಗೇಡ್ ಸಂಘಟಕ ಚಂದ್ರಶೇಖರ್, ನಗರಸಭಾ ಸದಸ್ಯ ಸಿದ್ದರಾಜು, ಅನಂತ್, ಸುನೀಲ್, ಕಿರಣ್, ರವಿ ಇತರರಿದ್ದರು.