

ಬಸವಕಲ್ಯಾಣ: ದೇಶ ಎಲ್ಲ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದೆ. ಇದರ ಜತೆಯಲ್ಲಿ ನೈತಿಕ ಗುಣಮಟ್ಟ ವೃದ್ಧಿ, ಶಾಂತಿ, ಸೌಹಾರ್ದತೆಗೆ ಎಲ್ಲರೂ ಸಹ ಕೈಜೋಡಿಸಿ ಬಲಿಷ್ಠ ಸಮಾಜ ನಿರ್ಮಿಸೋಣ ಎಂದು ಜಮಾತೆ ಇಸ್ಲಾಂ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷ ಪ್ರೊ.ಮಹ್ಮದ್ ಸಲೀಮ್ ಇಂಜಿನೀಯರ್ ಹೇಳಿದರು.
ನಗರದ ಬಿಕೆಡಿಬಿ ಸಭಾಭವನದಲ್ಲಿ ತಾಲೂಕು ಸದ್ಭಾವನಾ ಮಂಚ್ ವತಿಯಿಂದ ಶನಿವಾರ ಸಂಜೆ ಆಯೋಜಿಸಿದ್ದ ಶಾಂತಿ ಮತ್ತು ಸೌಹಾರ್ದತೆಯ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಧರ್ಮಗಳು, ಆಚರಣೆಗಳು ಬೇರೆ ಬೇರೆ ಇದ್ದರು ನಾವೆಲ್ಲರೂ ಭಾರತೀಯರು. ನಮ್ಮ ನಮ್ಮ ವಿಚಾರ ಭಿನ್ನಾಭಿಪ್ರಾಯ ಇದ್ದಿರಬಹುದು, ಆದರೆ ನಾವು ಪ್ರಥಮ ಭಾರತೀಯರು. ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಪ್ರಥಮ ಆದ್ಯತೆ ಆಗಿರಬೇಕು ಎಂದರು.
ಕರ್ನಾಟಕ ರಾಜ್ಯ ಜಮಾತೆ ಇಸ್ಮಾಂ ಹಿಂದ್ ಅಧ್ಯಕ್ಷ ಡಾ.ಸದ್ ಬೆಳಗಾವಿ ಮಾತನಾಡಿ, ನಮ್ಮ ದೇಶದಲ್ಲಿ ಅನೇಕ ರೀತಿಯ ಧರ್ಮಾಚಾರಣೆ, ಭಾಷೆ ಬೇರೆ ಬೇರೆ ಇದ್ದರೂ ಅದರಲ್ಲಿ ನಾವು ಪರಸ್ಪರರು ಸಹೋದರರಂತೆ ಬಾಳಿ ಬೆಳೆಗುತ್ತಿರುವುದು ವಿಶ್ವಕ್ಕೆ ನೀಡಿದ ಭಾರತೀಯರ ಕೊಡುಗೆಯಾಗಿದೆ. ಅನೇಕತೆಯಲ್ಲಿ ಏಕತೆ ಭಾರತೀಯ ವಿಶೇಷತೆ. ಇದು ನಮ್ಮ ದೇಶದ ಮೂಲ ಮಂತ್ರ ಶಾಂತಿವಾಗಿದೆ. ಈ ದಿಸೆಯಲ್ಲಿ ಬಸವಣ್ಣನವರು ಬಹುದೊಡ್ಡ ಸಂದೇಶ ನೀಡಿದ್ದಾರೆ ಎಂದರು.
ಬಿಡಿವಿಸಿ ಉಪಾಧ್ಯಕ್ಷ ಡಾ.ಜಿ.ಎಸ್.ಭುರಾಳೆ, ರಾಷ್ಟ್ರೀಯ ಬಸವ ದಳದ ತಾಲೂಕು ಅಧ್ಯಕ್ಷ ರವಿ ಕೊಳಕುರ, ಪ್ರಮುಖರಾದ ವಿಕ್ರಮ ಪಾಟೀಲ್, ಮೀರ್ ತಹಸೀನ್ ಅಲಿ, ಕೇಶಪ್ಪ ಬಿರಾದಾರ, ಮನೋಹರ ಮೈಸೆ ಮಾತನಾಡಿದರು. ಮುಖಂಡರಾದ ಮೀರವಾರಿಸ್ ಅಲಿ, ವೀರಣ್ಣ ಶೀಲವಂತ, ನೈಮೋದ್ದಿನ್, ಮಿರ್ಜಾ ಅನ್ವರ್ ಬೇಗ್, ಗಫೂರ್ ಅಹ್ಮದ್, ಕಿರಣ ಆರ್ಯ, ಸಂದೀಪ ಬುಯೆ, ನೀಲಕಂಠ ಭೆಂಡೆ, ರಿಯಾಜ್ ಪಟೇಲ್, ಅನ್ವರ್ ಭೋಸ್ಲೆ, ಜನಾಬ್ ಅಕ್ರಮ್, ಇಸ್ಮಾಯಿಲ್ ಸಾಬ್, ಹುಜುರಪಾಷಾ ಇತರರಿದ್ದರು.
ಜಿಲ್ಲಾ ಸದ್ಭಾವನ ಮಂಚ್ ಅಧ್ಯಕ್ಷ ಗುರುನಾಥ ಗಡ್ಡೆ ಸ್ವಾಗತಿಸಿದರು. ಮುಖಂಡ ಮುಜಾಹಿದ ಪಾಶಾ ಖುರೇಶಿ ಪ್ರಾಸ್ತಾವಿಕ ಮಾತನಾಡಿದರು. ತಾಲೂಕು ಸಂಚಾಲಕ ಅರ್ಜುನ ಕನಕ ವಂದಿಸಿದರು.