ಕಾನೂನು ಮೀರಿದರೆ ಕ್ರಮ : ಶಾಂತಿ ಸಭೆಯಲ್ಲಿ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಎಚ್ಚರಿಕೆ

04
Published on

ಬೆಳ್ತಂಗಡಿ: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಸರಣಿ ಹಬ್ಬಗಳ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕುಮಟ್ಟದ ಶಾಂತಿ ಸಭೆ ಬೆಳ್ತಂಗಡಿಯಲ್ಲಿ ನಡೆಯಿತು.

ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ನಾಗೇಶ್ ಕದ್ರಿ ಮಾತನಾಡಿ, ಗಣೇಶೋತ್ಸವವನ್ನು ಪ್ರತಿಯೊಬ್ಬರೂ ಕಾನೂನಿನ ಮಿತಿಯಲ್ಲಿ ಯಶಸ್ವಿಯಾಗಿ ನಡೆಸಲು ಇಲಾಖೆಯಿಂದ ಸಂಪೂರ್ಣ ಸಹಕಾರವಿದೆ. ಆದರೆ ಕಾನೂನು ಮೀರಿದರೆ ಕಾನೂನಿನ್ವಯ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಲ್ಲ ಹಬ್ಬಗಳನ್ನು ಸಂಭ್ರಮಿಸೋಣ. ಆದರೆ ಕಾನೂನು ಮೀರಿ ಹಬ್ಬಗಳನ್ನು ಆಚರಿಸಲು ಅವಕಾಶವಿಲ್ಲ ಎಂದರು.

ಬೆಳ್ತಂಗಡಿ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಜಿ.ಸುಬ್ಬಾಪುರ್ ಮಠ್ ಮಾತನಾಡಿ, ಯಾವುದೇ ಧರ್ಮದ ಹಬ್ಬಗಳಲ್ಲಿ ಯಾವುದೇ ಕಾರಣಕ್ಕೂ ಡಿಜೆ ಅಳವಡಿಸಲು ಮತ್ತು ರಾತ್ರಿ 10ರ ಬಳಿಕ ಧ್ವನಿವರ್ಧಕ ಬಳಸಲು ಅವಕಾಶವಿಲ್ಲ. ಕಾನೂನು ಬಾಹಿರವಾಗಿ ಡಿಜೆ ಮತ್ತು ಧ್ವನಿವರ್ಧಕ ಅಳವಡಿಸಿದರೆ ಮುಲಾಜಿಲ್ಲದೆ ಸಂಘಟಕರು ಮತ್ತು ಧ್ವನಿವರ್ಧಕ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ದ.ಕ. ಜಿಲ್ಲೆ ಮತೀಯ ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಶಾಂತಿ ಸೌಹಾರ್ದ ಕಾಪಾಡುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು.

ಶಾಮೀಯಾನ ಮಾಲೀಕರು , ಸೌಂಡ್ಸ್ ಮತ್ತು ಲೈಟಿಂಗ್ ಮಾಲೀಕರು, ಪ್ಲೇಕ್ಸ್ ಬ್ಯಾನರ್ ಮಾಲೀಕರು ಸೇರಿದಂತೆ ತಾಲೂಕಿನ ವಿವಿಧ ಗಣೇಶೋತ್ಸವ ಸಮಿತಿ ಮತ್ತು ಮಸೀದಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಬೆಳ್ತಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿ ಜಗದೀಶ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net