

ಜಮಖಂಡಿ: ಹುನ್ನೂರು ಹಾಗೂ ಸುತ್ತಮುತ್ತಲಿನ ಬಡಾವಣೆಯ ನಾಗರಿಕರಿಗೆ ಉಚಿತವಾಗಿ ವೈದ್ಯಕೀಯ ಸೇವೆ ಒದಗಿಸಬೇಕು ಎಂಬ ಸಂಕಲ್ಪ ಇಂದು ಸಾಕಾರಗೊಂಡಿದೆ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ ಕೋವಳ್ಳಿ ಹೇಳಿದರು.
ಹುನ್ನೂರಿನ ಪಿಎಂಶ್ರೀ ಸರ್ಕಾರಿ ಮಾದರಿ ಶಾಲೆ ಆವರಣದಲ್ಲಿ ಹುನ್ನೂರು ಸೌಹಾರ್ದ ಸಹಕಾರಿ ಸಂಘ, ಜಮಖಂಡಿ ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಏರ್ಪಡಿಸಿದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮದ ಹಿರಿಯರಾದ ಶೇಖರ ಸಾವಳಗಿ ಮಾತನಾಡಿ, ಪರಪೋಕಾರ ಜೀವನ ಸಾರ್ಥಕವಾಗುವುದು. ಹುನ್ನೂರು ಗ್ರಾಮದ ಸಿದ್ಧ ಸರೋವರದ ಕನಕದಾಸ ಉದ್ಯಾನದಲ್ಲಿ ಜಿಮ್ ಸಾಮಗ್ರಿ ಅಳವಡಿಸಿರುವ ಹುನ್ನೂರು ಸೌಹಾರ್ದ ಸಹಕಾರಿ ಸಂಘದ ಕಾರ್ಯದಿಂದಾಗಿ ಗ್ರಾಮಸ್ಥರು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಅನುಕೂಲವಾಗಿದೆ ಎಂದರು.
ಡಾ. ಎ. ಆರ್. ದೇವರೆಡ್ಡಿ ಮಾತನಾಡಿದರು. ಓಲೇಮಠದ ಆನಂದ ದೇವರು, ಹುನ್ನೂರಿನ ವಿಶ್ವನಾಥ ಶಾಸಿಗಳು ಆಶೀರ್ವಚನ ನೀಡಿದರು. 10 ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿರುವ ಸೂಲಗಿತ್ತಿ ವಯೋವೃದ್ಧೆ ಅಕ್ಕವ್ವ ಹಿರೋಜಿ ಸೇರಿ ಶಿಬಿರದಲ್ಲಿ ಭಾಗಿಯಾಗಿದ್ದ ವೈದ್ಯರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ 600ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿ ಉಚಿತವಾಗಿ ಔಷಧೋಪಚಾರ ಮಾಡಲಾಯಿತು.
ಸಂಘದ ಅಧ್ಯಕ್ಷ ಶಂಕರ ಜಾಲಿಗಿಡದ, ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ತೇಲಿ, ಇನ್ನರ್ ವೀಲ್ ಸಂಸ್ಥೆ ಅಧ್ಯಕ್ಷೆ ಗಿರಿಜಾ ಮೇತ್ರಿ ಇತರರು ಇದ್ದರು. ತ್ರೀಷಾ ಬುಜರುಕ ಪ್ರಾರ್ಥಿಸಿದರು. ಶ್ರೀಶೈಲ ತೇಲಿ ಸ್ವಾಗತಿಸಿದರು. ಚನ್ನಪ್ಪ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಬಳಗಾರ ಹಾಗೂ ಎಂ.ಎಚ್.ಕಡ್ಲಿಮಟ್ಟಿ ನಿರೂಪಿಸಿದರು. ಬಸವರಾಜ ಆಲಗೂರ ವಂದಿಸಿದರು.