

ಲಕ್ಕೂರು: ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಶ್ರೀ ದ್ರೌಪದಾಂಭ ದೇವಿಯ ಕರಗ ಮಹೋತ್ಸವಗಳನ್ನು ಹಳ್ಳಿಗಳಲ್ಲಿ ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡುವುದರಿಂದ ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದು ಆದಿಶಕ್ತಿ ಮಹಾ ಸಂಸ್ಥಾನಮಠದ ಪ್ರಣಾವನಂದಪುರಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಮಾಲೂರು ತಾಲೂಕು ಕೋಡಿಹಳ್ಳಿಯ ಶ್ರೀ ದ್ರೌಪದಾಂಭ ದೇವಿ ದೇವಾಲಯದ 4ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಬಳೆ ಶಾಸ್ತ್ರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತೀಯ ಸನಾತನ ಸಂಸತಿಗೆ ಸಮುದಾಯವು ತನ್ನದೇ ಆದ ಕಾಣಿಕೆ ನೀಡಿದೆ. ನಮ್ಮ ಸಮುದಾಯದ ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದೆ ಎಂದರು.
ಮಾಲೂರು ತಾಲೂಕಿನ ಹಲವು ಗ್ರಾಮಗಳಲ್ಲಿ ವಹ್ನಿಕುಲ ಕ್ಷತ್ರಿಯ (ತಿಗಳ) ಸಮುದಾಯವು ಶಾಸ್ತ್ರೋಕ್ತವಾಗಿ ಕರಗ ಉತ್ಸವಗಳನ್ನು ಆಚರಣೆ ಮಾಡುವುದರ ಮೂಲಕ ಮಾದರಿಯಾಗಿದ್ದಾರೆ. ಇಂತಹ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ಹೆಚ್ಚು ಹೆಚ್ಚಾಗಿ ನಡೆಯಬೇಕು. ಜಾತಿ ಭೇದವಿಲ್ಲದೆ ಪ್ರತಿಯೊಬ್ಬರು ಭಾಗವಹಿಸಿ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳಸಬೇಕು ಎಂದರು.
ಬುಧವಾರ ರಾತ್ರಿ ಕೋಡಿಹಳ್ಳಿ ಗೇಟ್ ಸಮೀಪ ಕರಗದ ಪೂಜಾರಿ ಅವರಿಗೆ ಬಳೆ ತೊಡಿಸುವ ಕಾರ್ಯಕ್ರಮ ನಡೆಯಿತು. ನಂತರ ಪೋತಲರಾಜು ಹಾಗೂ ಭರತ ಪೂಜಾರಿ ಭಾರತವನ್ನು ಪಠಿಸಿದ ನಂತರ ಕರಗದ ಶಕ್ತುತ್ಸ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದ್ರೌಪದಾಂಭ ದೇಗುಲದಲ್ಲಿ ಬುಧವಾರ ರಾತ್ರಿ 12ಕ್ಕೆ ದೇವರಿಗೆ ಪೂಜೆ ಸಲ್ಲಿಸಿದ ನಂತರ ಕರಗದ ಪೂಜಾರಿ ವಿ.ಸುರೇಶ್ ಕರಗವನ್ನು ಹೊತ್ತು ದೇವಾಲಯದಿಂದ ಹೊರಬರುತ್ತಿದ್ದಂತೆ ಭಕ್ತಾದಿಗಳು ಗೊವಿಂದ ನಾಮಸ್ಮರಣೆ ಮಾಡಿದರು.
ಕರಗದ ಪೂಜಾರಿ ತಮಟೆ ವಾದ್ಯಕ್ಕೆ ವಿವಿಧ ನೃತ್ಯವನ್ನು ಮಾಡುವುದರ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದರು.
ವೀರಕುಮಾರರು ಗೋವಿಂದ ನಾಮಸ್ಮರಣೆ ಮಾಡುತ್ತಾ ಕತ್ತಿಯಿಂದ ದೇಹಕ್ಕೆ ಹೊಡೆದು ಕೊಳ್ಳುವ ಹಲಗು ಸೇವೆ ನಡೆಯಿತು. ನಂತರ ಗ್ರಾಮದ ಮಧ್ಯಭಾಗದಲ್ಲಿದ್ದ ನಿರ್ಮಿಸಿರುವ ಅಗ್ನಿಕುಂಡವನ್ನು ಕರಗದ ಪೂಜಾರಿ ಹಾಗೂ ಭಕ್ತಾದಿಗಳು ಪ್ರವೇಶಿಸಿದರು. ಇದಾದ ನಂತರ ಗುರುವಾರ ಮಧ್ಯಾಹ್ನ 11 ಗಂಟೆಗೆ ದೇಗುಲದಲ್ಲಿ ಕರಗ ಇಳಿಸಿದ ಮೇಲೆ ಕಾರ್ಯಕ್ರಮಕ್ಕೆ ತೆರೆ ಬಿದ್ದಿತು.
ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಸುರೇಶ್, ಗ್ರಾಪಂ ಸದಸ್ಯೆ ಸುನಂದಮ್ಮ, ಮಾಜಿ ಗ್ರಾಪಂ ಉಪಾಧ್ಯಕ್ಷ ವಿ.ರಾಜಪ್ಪ, ದೇವಾಲಯ ಸಮಿತಿಯ ಗೌರವಾಧ್ಯಕ್ಷ ಪಿ.ಕೃಷ್ಣಪ್ಪ, ಅಧ್ಯಕ್ಷ ಕೆ.ನಾರಾಯಣಸ್ವಾಮಿ, ಕಾರ್ಯದರ್ಶಿ ವೆಂಕಟೇಶಪ್ಪ, ಸದಸ್ಯರಾದ ಪಿ.ರಾಜಪ್ಪ, ಸಿ.ಪ್ರಕಾಶ್, ಕೆ.ಮಹೇಶ್, ಎಂ.ಮುನಿಯಪ್ಪ, ಮುಖಂಡರಾದ ಕೆಂಪಯ್ಯ, ಟಿ.ಎನ್.ಪ್ರಶಾಂತ್, ಕೆ.ಶ್ರೀನಿವಾಸ್, ಪಾಪಣ್ಣ, ವೆಂಕಟೇಶ್ರೆಡ್ಡಿ, ಆರ್.ಚಂದ್ರಪ್ಪ, ಸಿ.ಮುನಿರಾಜು, ಮಂಜುನಾಥ್, ಎಂ.ಮುನಿಕೃಷ್ಣ, ವೈ.ನಾರಾಯಣಸ್ವಾಮಿ, ವೆಂಕಟೇಶಪ್ಪ, ಶಂಕರಪ್ಪ, ಅಬ್ಬಯ್ಯಪ್ಪ, ಪಿ.ವೆಂಕಟೇಶ್, ಇದ್ದರು.
ವಿವಿಧ ದೇವರುಗಳ ಪಲ್ಲಕ್ಕಿ ಉತ್ಸವ
ಪಲ್ಲಕ್ಕಿ ಉತ್ಸವದಲ್ಲಿ ಶ್ರೀ ಮಾರಿಕಾಂಭದೇವಿ, ಶ್ರೀ ಸಪಲಾಂಭದೇವಿ, ಶ್ರೀ ಗಂಗಮ್ಮದೇವಿ, ಶ್ರೀ ಯಲ್ಲಮ್ಮದೇವಿ, ಶ್ರೀ ಲಕ್ಷಿ$್ಮವೆಂಕಟೇಶ್ವರಸ್ವಾಮಿ, ಶ್ರೀ ಕೈವಾರತಾತಯ್ಯ ಶ್ರೀ ಮುನೇಶ್ವರಸ್ವಾಮಿ, ಶ್ರೀ ದುಗ್ಗಲಮ್ಮದೇವಿ ದೇವಾಲಯ ಸೇರಿ ಸುಮಾರು 10 ದೇವಾಲಯಗಳ ಉತ್ಸವ ಮೂರ್ತಿಗಳಿಗೆ ವಿಶೇಷ ಹೂವಿನ ಅಲಂಕಾರ ಮಾಡಿ ನಂತರ ಆಕರ್ಷಕ ಪಲ್ಲಕ್ಕಿಗಳಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ಮಾಡಲಾಯಿತು.
13 ಎಲ್ಕೆಆರ್ 2
ಮಾಲೂರು ತಾಲೂಕಿನ ಕೋಡಿಹಳ್ಳಿ ಗ್ರಾಮದ ಶ್ರೀ ದ್ರೌಪತಾಂಭ ದೇವಿ ದೇವಾಲಯದ 4ನೇ ವರ್ಷದ ಕರಗ ಮಹೋತ್ಸವದ ಅಂಗವಾಗಿ ಬಳೆ ಶಾಸ್ತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆದಿಶಕ್ತಿ ಮಹಾ ಸಂಸ್ಥಾನಮಠದ ಪ್ರಣಾವನಂದಪುರಿ ಸ್ವಾಮೀಜಿ.
13 ಎಲ್ಕೆಆರ್ 3
ಮಾಲೂರು ತಾಲೂಕು ಕೋಡಿಹಳ್ಳಿ ಶ್ರೀ ದ್ರೌಪದಾಂಭ ಶಕ್ತೂತ್ಸವದ ಅಂಗವಾಗಿ ಕರಗದ ಪೂಜಾರಿ ವಿ.ಸುರೇಶ್ ಕರಗವನ್ನು ಹೊತ್ತು ಕೋಡಿಹಳ್ಳಿ ಗೇಟ್ನ ಶ್ರೀ ಆಂಜನೇಯಸ್ವಾಮಿ ದೇವಾಲಯದ ಬಳಿ ತಮಟೆ ವಾದ್ಯಕ್ಕೆ ತಕ್ಕಂತೆ ವಿವಿಧ ರೀತಿಯಲ್ಲಿ ನೃತ್ಯ ಮಾಡಿದರು.