

ರಾಯಚೂರು: ಜನರು ಸದ್ಭಾವನೆಯಿಂದ ಬದುಕಿದಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಿದ್ದು, ಎಲ್ಲರೂ ಸಹೋದರತ್ವ ಭಾವನೆಯಿಂದ ಬಾಳಬೇಕು ಎಂದು ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸಂಚಾಲಕಿ ಸ್ಮೀತಾ ಅಕ್ಕ ಹೇಳಿದರು.
ಸ್ಥಳೀಯ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ವಿಶ್ವ ಶಾಂತಿಯ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರೀರದ ಒಳಗಡೆ ಇರುವ ಚೈತನ್ಯ ಆತ್ಮವೇ ಭಗವಂತನಾಗಿದ್ದು, ಆತ್ಮ ಜ್ಞಾನದಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದರು.
ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಎಲ್ಲ ಧರ್ಮ ಸಂಸ್ಥಾಪಕರು ಜನರಿಗೆ ಜೀವನದ ರ್ಮಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಒಬ್ಬರು ಪ್ರೀತಿಯ ವೌಲ್ಯ ಹಾಗೂ ಮತ್ತೊಬ್ಬರು ತ್ಯಾಗದ ವೌಲ್ಯವನ್ನು ತಿಳಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಮುಸ್ಲಿಂ ಧರ್ಮಗುರು ಮಹ್ಮದ್ ಸಲೀಂ ಪಾಷಾ ಮಾತನಾಡಿ, ಪ್ರತಿಯೊಬ್ಬರ ಮನುಷ್ಯ ಶಾಂತಿಯನ್ನು ಬಯಸುತ್ತಿದ್ದು, ದೇವರ ನಾಮಸ್ಮರಣೆಯಿಂದ ಮಾತ್ರ ಶಾಂತಿ ಲಭಿಸಲು ಸಾಧ್ಯವಾಗಲಿದೆ. ಎಲ್ಲರೂ ಸಹೋದರತ್ವ ಭಾವದಿಂದ ನೋಡುವ ಮತ್ತು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರೈಸ್ತ ಧರ್ಮಗುರು ರೆವೆರೆಂಡ್ ಸಿ.ಮಾರ್ಕ್, ಮುಖಂಡರಾದ ಕೆ.ದೇವಣ್ಣ ನಾಯಕ, ಬಿ.ಕೆ.ಕರಿಯಪ್ಪ, ಶಾರದಾ ಉಪಸ್ಥಿತರಿದ್ದರು.